ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹನುಮಂತ ಅತ್ಯಂತ ಶಕ್ತಿಶಾಲಿ ಭಗವಂತ. ಅವನನ್ನು ನಂಬಿ ಪೂಜಿಸಿದರೆ, ಭಜಿಸಿದರೆ ಖಂಡಿತ ಅವನು ನಮ್ಮ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ನೀವು ಹನುಮ ಮಾಲಾ ಧರಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದೀರಿ. ನಿತ್ಯವೂ ಹನುಮನನ್ನು ಪೂಜಿಸುತ್ತಿರುವ ನಿಮ್ಮ ಸಂಕಷ್ಟಗಳೆಲ್ಲ ದೂರವಾಗಿ ನಿಮ್ಮ ಬಾಳಿನಲ್ಲಿ ಎಂದಿಗೂ ಶಾಂತಿ-ಸಮಾಧಾನ ಸಿಗಲಿ ಎಂದು ಜಯಂತಿ ಅಕ್ಕನವರು ಹೇಳಿದರು.
ಪಟ್ಟಣದ ಶ್ರೀ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹನುಮ ಮಾಲಾಧಾರಿಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡಿದರು.
ನಿತ್ಯವೂ ನೀವು ಹನುಮನನ್ನು ಅನನ್ಯ ಭಾವದಿಂದ ಪೂಜಿಸುತ್ತಿದ್ದೀರಿ. ಹನುಮಾನ್ ಚಾಲೀಸಾವನ್ನು ಸಹ ನೀವು ಪಠಿಸುತ್ತಿದ್ದೀರಿ. ಹನುಮನಿಗೆ ಇರುವ ಇನ್ನೊಂದು ಹೆಸರೆಂದರೆ, ಸಂಕಟ ಮೋಚನ ಹನುಮಾನ್ ಎಂದು. ಆದ್ದರಿಂದ ಆತ ಎಲ್ಲರ ಸಂಕಟಗಳನ್ನು ದೂರೀಕರಿಸಲಿ ಎಂಬುದು ನಮ್ಮ ಹಾರೈಕೆ ಎಂದರು.
ಸ್ಥಳೀಯ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ನರೇಗಲ್ಲ ಪಟ್ಟಣದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ಹನುಮ ಮಾಲಾಧಾರಿಗಳಿದ್ದಂತೆ ಅಯ್ಯಪ್ಪ ಸ್ವಾಮಿಯ ಭಕ್ತರೂ ಸಹ ಇದ್ದಾರೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆಲ್ಲ ಸಂತಸದ ಸಂಗತಿ. ಇದರಿಂದ ಊರು ಶಾಂತಿ, ಸಮಾಧಾನಗಳಿಂದ ಇರುತ್ತದೆ ಎಂದರು.