HomeChikkamagaluruತತ್ವತ್ರಯಗಳ ಪರಿಪಾಲನೆಯಿಂದ ಸುಖ ಪ್ರಾಪ್ತಿ: ರಂಭಾಪುರಿ ಶ್ರೀ

ತತ್ವತ್ರಯಗಳ ಪರಿಪಾಲನೆಯಿಂದ ಸುಖ ಪ್ರಾಪ್ತಿ: ರಂಭಾಪುರಿ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಿಹರ: ಭಾರತೀಯ ಆಧ್ಯಾತ್ಮ ಸಂಪತ್ತು ಅದ್ಭುತ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮದ ಅರಿವು ಸಾಧನೆ ಮುಖ್ಯ. ವೀರಶೈವ ಧರ್ಮದ ತತ್ವತ್ರಯಗಳ ಪರಿಪಾಲನೆಯಿಂದ ಸುಖ, ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ನಗರದ ಸಿದ್ಧೇಶ್ವರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಶ್ರೀ ಮಹಾತಪಸ್ವಿ ಫೌಂಡೇಶನ್ ಸಂಯೋಜಿಸಿದ ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಸಾಧನೆಯ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮವೆಂದರಿತು ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಯುಗಪುರುಷರು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರು. ಅಂತರಾಂಗ-ಬಹಿರಂಗ ಶುದ್ಧಿಯಿಂದ ಬದುಕಿಗೆ ಶ್ರೇಯಸ್ಸು ದೊರಕುವುದೆಂದು ನಿರಂತರ ಶ್ರಮಿಸಿದರು. ಶಿವಾಗಮಗಳ ಧರ್ಮ ಸಾಹಿತ್ಯವನ್ನು ಜನರ ಮನೆಮನಗಳಿಗೆ ತಲುಪಿಸಲು ಗಟ್ಟಿ ಹೆಜ್ಜೆಯನ್ನಿಟ್ಟವರು. ಜೀವನದ ಜಂಜಾಟಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಆದರ್ಶ ಸಂಸ್ಕಾರ ಮತ್ತು ಸದ್ವಿಚಾರ ಬೋಧಿಸಿ ಅವರಲ್ಲಿ ಸ್ಫೂರ್ತಿ ಮತ್ತು ಚೈತನ್ಯ ಶಕ್ತಿಯನ್ನು ಹೆಚ್ಚಿಸಿದ ಪರಮ ವಿರಾಗಿ ತಪಸ್ವಿಗಳು.

ಮನುಷ್ಯನಲ್ಲಿ ದೈವೀ ಗುಣ, ಅಸುರೀ ಗುಣ ಎರಡೂ ಇವೆ. ಸಂಸಾರ ಸಾಗರದಿಂದ ಪಾರು ಮಾಡಿ ಸುಖ ಸಾಗರದತ್ತ ಕರೆದುಕೊಂಡು ಹೋಗುವ ಗುಣಗಳು ದೈವೀ ಗುಣಗಳು. ದುಃಖದ ಕಡಲಿನಲ್ಲಿ ಮುಳುಗಿಸಿಬಿಡುವ ಗುಣಗಳು ಅಸುರೀ ಗುಣಗಳಾಗಿವೆ. ದೈವೀ ಗುಣಗಳ ಸಂವರ್ಧನೆಗಾಗಿ ನಿತ್ಯ ಶ್ರಮಿಸಿ ಜಗದ ಜನರಿಗೆ ಶಾಂತಿ, ಸಾಮರಸ್ಯ, ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿದವರು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳೆಂದು ಹರುಷ ವ್ಯಕ್ತಪಡಿಸಿದರು.

ಆಶಯ ನುಡಿಗಳನ್ನಾಡಿದ ಅವಧೂತ ಕವಿ ಗುರುರಾಜ ಗುರೂಜಿ ಮಾತನಾಡಿ, ಭಾರತೀಯ ಆಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿದ ಕೀರ್ತಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ಸಲ್ಲುತ್ತದೆ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗಗುಣ ಕರುಣಿಸಿದ ಕಾರುಣ್ಯಜ್ಯೋತಿ ಅವರು. ಉದಾತ್ತವಾದ ಜೀವನ ಮೌಲ್ಯಗಳನ್ನು ಪರಿಪಾಲಿಸಿ ಜನ ಸಮುದಾಯದ ಶ್ರೇಯಸ್ಸಿಗೆ ನಿರಂತರ ಕೃಷಿ ಕೈದವರು. ಹಸಿವೆ, ತೃಷೆಗಳನ್ನು ಮರೆತು ಭಕ್ತ ಸಂಕುಲದ ಒಳಿತಿಗಾಗಿ ತಪಗೈದ ಸಿದ್ಧಿಪುರುಷರ ಶತಮಾನೋತ್ಸವ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದ ಅವರು, ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಶುಭಾಗಮನದೊಂದಿಗೆ ಸಮಾರಂಭ ನಡೆಯುತ್ತಿರುವುದು ನಮ್ಮೆಲ್ಲರ ಪೂರ್ವಾರ್ಜಿತ ಸುಕೃತವೆಂದು ಹರುಷ ವ್ಯಕ್ತಪಡಿಸಿದರು.
ಅವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು, ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.

ಪ್ರೊ. ಎಸ್.ಎಂ. ಗಂಗಾಧರಯ್ಯ ಮಹಾತಪಸ್ವಿ ಫೌಂಡೇಶನ್ ಸಾಧನೆಯ ಹತ್ತು ವರ್ಷದ ಅಭಿಯಾನದ ಸಮಗ್ರ ನೋಟ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದಾವಣಗೆರೆ ಅಶ್ವಿನಿ ಆಯುರ್ವೇದ ವಿಜ್ಞಾನ ನಿರ್ದೇಶಕ ಡಾ. ಯು.ಎಂ. ಜ್ಞಾನೇಶ್ವರ ಅವರಿಗೆ ‘ಆಯುರ್ ತಪೋ ಜ್ಞಾನ ರತ್ನ’ ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾತಪಸ್ವಿ ಫೌಂಡೇಶನ್ ಉಪಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ ವಹಿಸಿದ್ದರು.

ಡಾ. ಹಾ.ಮಾ. ನಾಗಾರ್ಜುನ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಮಹಾತಪಸ್ವಿ ಗುರುಕುಲ ಸಾಧಕರಿಂದ ವೇದಘೋಷ, ಶ್ರೀ ಶೆಲ್ಲಿಕೇರಿ ಮತ್ತು ಪರಮೇಶ್ವರ ಕತ್ತಿಗೇರಿ ಅವರಿಂದ ಭಕ್ತಿಗೀತೆ ಜರುಗಿತು. ಹುಬ್ಬಳ್ಳಿಯ ಆರಾಧನಾ ತಿರ್ಲಾಪುರ ಅವರಿಂದ ಭರತನಾಟ್ಯ ಜರುಗಿತು. ಐಶ್ವರ್ಯ ಸ್ವಾಗತಿಸಿದರು. ಪ್ರೊ. ಎ.ಎಂ. ರಾಜಶೇಖರಯ್ಯ, ಪಿ.ಬಿ. ಕೊಟ್ರೇಶಪ್ಪ ನಿರೂಪಿಸಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ ಮಾತನಾಡಿ, ಮನುಷ್ಯನು ಮಾನವತೆಯಿಂದ ದೈವತ್ವಕ್ಕೆ ಏರುವುದು ಅಷ್ಟು ಸುಲಭವಲ್ಲ. ಇದಕ್ಕೆಲ್ಲ ಶ್ರಮ, ಪ್ರಯತ್ನ ಇರಬೇಕಾಗುತ್ತದೆ. ಆಧ್ಯಾತ್ಮ ಲೋಕದಲ್ಲಿ ಅನೇಕ ಆಧ್ಯಾತ್ಮಿಕ ವಿಭೂತಿ ಪುರುಷರನ್ನು ಇತಿಹಾಸದಲ್ಲಿ ಕಾಣುತ್ತೇವೆ. ಅಂಥಹ ಸಿದ್ಧಿಪುರುಷರಲ್ಲಿ ಅಗ್ರಸ್ಥಾನದಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳನ್ನು ಕಾಣಬಹುದು. ಶಾಪಾನುಗ್ರಹ ಶಕ್ತಿ ಸಂಪಾದಿಸಿದರೂ ಯಾರಿಗೂ ಶಾಪ ಕೊಡಲಿಲ್ಲ. ಜನರ ತಾಪವನ್ನು ಪರಿಹರಿಸಿ ಸತ್ಪ್ರಜೆಯನ್ನಾಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!