ಸಂತೋಷ ನಾವು ಕಾಣುವ ದೃಷ್ಟಿಯಲ್ಲಿದೆ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಸತ್ಯ, ಶಾಂತಿ ಎಲ್ಲರ ಬಾಳಿಗೆ ಅಗತ್ಯ. ಸತ್ಯ ಶುದ್ಧವಾದ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಂವರ್ಧಿಸುತ್ತದೆ. ಆದರ್ಶ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಚಿಂತನೆಗಳು ದಾರಿದೀಪವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಂತೋಷ ಅನ್ನುವುದು ಹಣ, ಆಸ್ತಿ-ಅಂತಸ್ತಿನಲ್ಲಿಲ್ಲ. ಸಂತೋಷ ನಾವು ಕಾಣುವ ದೃಷ್ಟಿಯಲ್ಲಿದೆ. ಎಲ್ಲಾ ಬಿದಿರುಗಳು ಕೊಳಲಾಗುವುದಿಲ್ಲ. ಕೆಲವರಿಗೆ ದೋಣಿಗಳಾಗುತ್ತವೆ. ಕೆಲವರಿಗೆ ಏಣಿಗಳಾಗುತ್ತವೆ. ಕೆಲವರಿಗೆ ಮನೆಗಳಾಗುತ್ತವೆ. ಮನುಷ್ಯ ಜೀವನವು ಸಹ ಹಾಗೆಯೇ ಇರುತ್ತದೆ. ಅಕ್ಷರ ಕಲಿತ ವ್ಯಕ್ತಿ ಕೆಲವೊಮ್ಮೆ ಭ್ರಷ್ಟನಾಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಿಲ್ಲ. ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಗಡಿಯಾರ ಮಾತ್ರ. ಬಡವರಿಗೂ ಶ್ರೀಮಂತರಿಗೂ ಒಂದೇ ರೀತಿ ಇರುತ್ತದೆ. ಇದು ಯಾರಿಗೂ ತಲೆ ಬಾಗುವುದಿಲ್ಲ. ವಿದ್ಯಾ, ಬುದ್ಧಿ, ಹೃದಯ, ಹೊಟ್ಟೆ, ನೆಲ, ಜಲ, ಅನ್ನ, ಗಾಳಿ, ಬೆಳಕು ಇವೆಲ್ಲವೂ ದೇವರು ಕೊಟ್ಟ ಕೊಡುಗೆ ಎಂಬುದನ್ನು ಯಾರೂ ಮರೆಯಬಾರದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ನಿರೂಪಿಸಿದ್ದನ್ನು ಎಲ್ಲರೂ ನೆನಪಿಡುವ ಅವಶ್ಯಕತೆ ಇದೆಯೆಂದರು.

ಸಮಾರಂಭದಲ್ಲಿ ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಹೂವಿನ ಹಡಗಲಿ ಗವಿಮಠದ ಶಾಂತವೀರ ಸ್ವಾಮೀಜಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಆಗಸ್ಟ್ ತಿಂಗಳಿನ `ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಹೂವಿನಹಡಗಲಿ, ಆಲ್ದೂರು, ಬೆಂಗಳೂರು, ಕಲಬುರ್ಗಿ, ಲಕ್ಷ್ಮೇಶ್ವರದ ಭಕ್ತರು ಶ್ರಾವಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗಯ್ಯ ಶಾಸ್ತ್ರಿಗಳಿಂದ ಸ್ವಾಗತ, ವಿಠಲಾಪುರ ಹಿರೇಮಠದ ಗಂಗಾಧರ ಸ್ವಾಮಿ ಅವರಿಂದ ಪ್ರಾರ್ಥನೆ ಜರುಗಿತು. ಪ್ರಭಾರಿ ಮುಖ್ಯೋಪಾಧ್ಯಾಯ ವೀರೇಶ ಕುಲಕರ್ಣಿ ನಿರೂಪಿಸಿದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯನ ದೈಹಿಕ ಬೆಳವಣಿಗೆಗೆ ನೀರು, ಆಹಾರ ಮುಖ್ಯವಾಗಿರುವಂತೆ ಬದುಕಿನ ವಿಕಾಸಕ್ಕೆ ಮತ್ತು ಅಭಿವೃದ್ಧಿಗೆ ಧರ್ಮಾಚರಣೆ ಅಗತ್ಯವಾಗಿದೆ. ಒಳ್ಳೆಯ ನಡತೆ ಮನುಷ್ಯನ ಆಸ್ತಿ. ಒಳ್ಳೆಯ ಸಂಬಂಧ ಜೀವನದ ಆಸ್ತಿ. ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ. ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೆಲೆಯುಳ್ಳ ಮಾನವ ಜೀವನಕ್ಕೆ ಸಂಸ್ಕಾರ-ಸAಸ್ಕೃತಿಯಿತ್ತು ಸಕಲರನ್ನು ಉದ್ಧರಿಸಿದರೆಂದರು.


Spread the love

LEAVE A REPLY

Please enter your comment!
Please enter your name here