
ವಿಜಯಸಾಕ್ಷಿ ಸುದ್ದಿ, ರಾಣೆಬೆನ್ನೂರು: ಮಾನವ ಜೀವನ ಅಮೂಲ್ಯವಾದುದು. ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಸಂಪಾದಿಸಿಕೊಡು ಬಾಳಬೇಕೆಂದು ಶಾಸ್ತ್ರ ನಿರೂಪಿಸುತ್ತದೆ. ಆಧ್ಯಾತ್ಮ ಅರಿವು ಮತ್ತು ಸಾಧನೆಯಿಂದ ಬದುಕಿನಲ್ಲಿ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಹೊನ್ನತ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಹೊನ್ನನಾಗದೇವತಾ ಹಾಗೂ ಶ್ರೀ ಹೇಮಾವತಿ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಅದ್ಭುತ ಶಕ್ತಿಯಿದೆ. ಧರ್ಮದ ಆದರ್ಶ ಮೌಲ್ಯಗಳನ್ನು ಅರಿತು ಆಚರಿಸಿ ಬಾಳುವಲ್ಲಿ ಜೀವನದ ಶ್ರೇಯಸ್ಸಿದೆ. ದೇವರು, ಧರ್ಮದಲ್ಲಿ ಶ್ರದ್ಧೆ ನಂಬಿಕೆ ಯಾವತ್ತೂ ನಾಶಗೊಳ್ಳಬಾರದು. ಈ ಭೂಮಿಯನ್ನು ಹೊತ್ತ ಆದಿಶೇಷನ ಶಕ್ತಿ ಅಪಾರ. ಸರ್ಪದೋಷ ನಿವಾರಣೆಗಾಗಿ ಎಲ್ಲೆಲ್ಲೋ ಹೋಗುವ ಜನರಿಗಾಗಿ ಇಂದು ಈ ಗ್ರಾಮದಲ್ಲಿಯೇ ಹೊನ್ನನಾಗದೇವತೆ ನೆಲೆಗೊಂಡಿರುವುದು ತಮ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ. ದೇವನೊಬ್ಬ-ನಾಮ ಹಲವು. ಇದನ್ನರಿತು ಧರ್ಮ ದೈವದ ಶಕ್ತಿ ಒಂದೇ ಆಗಿದೆಯೇ ಹೊರತು ಬೇರೆ ಬೇರೆಯಿಲ್ಲ. ಭಜಿಸುವ, ಪೂಜಿಸುವ, ಸ್ಮರಿಸುವ ನಿಷ್ಠೆಯಿದ್ದರೆ ಬಾಳು ಉಜ್ವಲಗೊಳ್ಳುವುದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳನ್ನು ಅರಿತು ಬಾಳಬೇಕೆಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಬಹುದಿನಗಳ ಸಂಕಲ್ಪ ಇವತ್ತು ಪೂರ್ಣಗೊಂಡಿರುವುದು ಸಂತೋಷದ ಸಂಗತಿ. ಶಿವಶಕ್ತಿಯಿಂದ ಈ ಜಗತ್ತು ತುಂಬಿದೆ. ಜಗನ್ಮಾತೆ ಹೊನ್ನನಾಗದೇವತಾ-ಹೇಮಾವತಿ ನೆಲೆಗೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.
ದೇವಸ್ಥಾನದ ಮುಖ್ಯಸ್ಥ ಶಿವಣ್ಣ ಲಮಾಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು. ಶಿಕ್ಷಕಿ ಕಸ್ತೂರಮ್ಮ ಪಾಟೀಲ ನಿರೂಪಿಸಿದರು. ವೈದಿಕ ಕಾರ್ಯಕ್ರಮಗಳನ್ನು ತೆಲಗುಂದದ ಗುರುಶಾಸ್ತ್ರ ಬಳಗದವರು ನೆರವೇರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಶಾಂತಿಯಿಂದ ತತ್ತರಿಸುತ್ತಿರುವ ಈ ಜೀವ ಜಗತ್ತಿಗೆ ಶಾಂತಿ ಬೇಕಾಗಿದೆ. ಶಾಂತಿಯ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಹೊನ್ನನಾಗದೇವತಾ-ಹೇಮಾವತಿ ಶಕ್ತಿ ಅಪಾರವಾಗಿದೆ. ನಮ್ಮ ನಂಬಿಗೆ, ವಿಶ್ವಾಸಕ್ಕೆ ತಕ್ಕಂತೆ ಫಲಗಳನ್ನು ಪಡೆಯಲು ಸಾಧ್ಯವಾಗುವುದೆಂದರು.

