ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ಪತಿ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೆ.ಎಸ್. ಜಯಶ್ರೀ (25) ಮೃತ ದುರ್ಧೈವಿಯಾಗಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಮತ್ತು ಜಯಶ್ರೀ ವಿವಾಹದ ಬಳಿಕ ಎಲ್ಲವೂ ಚೆನ್ನಾಗಿಯೇ ಇತ್ತು.
ಆದ್ರೆ ಬಳಿಕ ಪತಿ ಚಂದ್ರಶೇಖರ್ ಬೇರೆ ಯುವತಿ ಜೊತೆ ಸದಾ ಚಾಟಿಂಗ್ ಮಾಡ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಜಯಶ್ರೀಗೆ ಗೊತ್ತಾಗಿದೆ. ಇದನ್ನು ಆಕೆ ಪತಿ ಬಳಿ ಪ್ರಶ್ನಿಸಿದ್ದಾಳೆ. ಆ ಬಳಿಕ ಚಂದ್ರಶೇಖರ್ ಜಯಶ್ರೀಗೆ ಕಿರುಕುಳ ನೀಡಲು ಆರಂಭಿಸಿದ್ದ.
ಇದರಿಂದಾಗಿ ಬೇಸತ್ತಿದ್ದ ಜಯಶ್ರೀ ಡೆತ್ ನೋಟ್ ಬರೆದಿಟ್ಟು ತನ್ನ ತವರಾದ ಕೊಂಡಾವಲಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರ್ ಬಂಧಿಸುವವರೆಗೆ ಶವ ಸಂಸ್ಕಾರ ಮಾಡಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಘಟನಾ ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಡೆತ್ ನೋಟ್ ನಲ್ಲಿ ಏನಿದೆ?
ಮದುವೆ ಆಗುವಾಗ ಇಷ್ಟ ಪಟ್ಟು ಮಾಡಿಕೊಳ್ಳಬೇಕೇ ಹೊರತು ಕಷ್ಟ ಪಟ್ಟು ಅಲ್ಲ. ಸುಮ್ಮನೆ ನಾನು ಅವರಿಬ್ಬರ ಮಧ್ಯ ದಲ್ಲಿ ಯಾಕೆ ಅಡ್ಡ ಬರಬೇಕು. ಯಾವಾಗಲೂ ಇಬ್ಬರೂ ಫೋನ್, ಮೆಸೇಜ್ ಮಾಡುತ್ತಾ ಇರುತ್ತಾರೆ. ಯಾರ ಮೆಸೇಜ್, ಫೋನ್ ಅಂತ ಕೇಳಿದರೆ ಫ್ರೆಂಡ್ ಅಂತ ಹೇಳ್ತಾರೆ. ಎಷ್ಟೇ ಕ್ಲೋಸ್ ಫ್ರೆಂಡ್ ಆದರೂ ಯಾವಾಗಲು ಫೋನ್, ಮೆಸೇಜ್ ಮಾಡೋದು ಏನು ಇರುತ್ತೋ ನನಗೆ ಗೊತ್ತಿಲ್ಲ.
ಏನು ಯಾವಾಗಲೂ ಆಕೆ ಜೊತೆ ಮೆಸೇಜ್ ಎಂದು ಕೇಳಿದರೆ ಕೋಪ ಮಾಡಿಕೊಂಡು ನನ್ನ ಜೊತೆ ಸರಿಯಾಗಿ ಮಾತಾಡಲ್ಲ. ಇವರಿಗೆ ನಾನು ಇಷ್ಟ ಇಲ್ಲವಂತೆ. ಇದು ನನಗೆ ಗೊತ್ತಾಗಿದ್ದು ಮದುವೆ ಬಳಿಕ. ಈ ವಿಷಯ ತಿಳಿದ ಮೇಲೆ ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಇವರಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ನಮ್ಮ ತಂದೆ, ತಾಯಿಗೂ ಗೊತ್ತಿಲ್ಲ ಎಂಡು ಡೆತ್ ನೋಟ್ನಲ್ಲಿ ಜಯಶ್ರೀ ಬರೆದುಕೊಂಡಿದ್ದಾರೆ.