ಚಿತ್ರದುರ್ಗ:- ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ಪತಿ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣಾಗಿದ್ದರು.
ಪತ್ನಿ ಸಾವಿನಿಂದ ಮನನೊಂದಿದ್ದ ಪತಿ ಇದೀಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 25 ವರ್ಷದ ಆಂಧ್ರಪ್ರದೇಶ ಮೂಲದ ಪ್ರವಲ್ಲಿಕ ನೇಣಿಗೆ ಶರಣಾದ ಪತ್ನಿ ಎನ್ನಲಾಗಿದ್ದು, ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ಹಾಗೂ ಮತ್ತಿತರೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.
ಸುದರ್ಶನ್ ಮೊಳಕಾಲ್ಮೂರಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಗಿರಿಜಯ್ಯನಹಟ್ಟಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ, ಸಿಪಿಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.