ಬೆಂಗಳೂರು: ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವತಿಯ ಮೊಬೈಲ್ ನಂಬರ್ ಕೇಳಿ, ಕಾರ್‌ನಲ್ಲಿ ಬರುವಂತೆ ಬಲವಂತ ಮಾಡಿದ ಆರೋಪದ ಮೇಲೆ ಕನ್ನಡಪರ ಸಂಘಟನೆ ಮುಖಂಡ ಉಮೇಶ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಯುವತಿ ದೂರಿನನ್ವಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಘಟನೆ ಬುಧವಾರ ರಾತ್ರಿ ನಾಗರಭಾವಿ ಪ್ರದೇಶದ ಪಬ್‌ನಲ್ಲಿ ನಡೆದಿದ್ದು, ಸ್ನೇಹಿತೆಯರೊಂದಿಗೆ ಪಾರ್ಟಿಗೆ ಬಂದಿದ್ದ ಯುವತಿಗೆ ಉಮೇಶ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಂಬರ್ ಕೊಡಲು ನಿರಾಕರಿಸಿದ ಬಳಿಕ ಕಣ್ಣು ಸನ್ನೆ, ಅಸಭ್ಯ ಮಾತುಗಳು ಹಾಗೂ ಹೊರಗೆ ಕಾರಿಗೆ ಬರುವಂತೆ ಕೈ ಹಿಡಿದು ಎಳೆದಾಡಿದ್ದಾನೆ ಎನ್ನಲಾಗಿದೆ.
ಪಾರ್ಟಿ ಬಳಿಕ ಕ್ಯಾಬ್ ಹತ್ತುವ ವೇಳೆ ಯುವತಿಯ ಬಾವನೊಂದಿಗೆ ವಾಗ್ವಾದ ನಡೆದು, ಹಲ್ಲೆಗೂ ತಿರುಗಿದೆ. ಈ ಹಿನ್ನೆಲೆಯಲ್ಲಿ ಉಮೇಶ್ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿದೂರು ನೀಡಿದ್ದಾರೆ. ಎರಡು ಕಡೆಯಿಂದಲೂ ದೂರು ದಾಖಲಾಗಿದ್ದು, ಎಫ್‌ಐಆರ್ ಬಳಿಕ ಉಮೇಶ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



