ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಇದೇ ಮೊದಲು ಐಪಿಎಲ್ ಮಾದರಿಯಲ್ಲಿ ಹಾರ್ಡ್ ಟೆನಿಸ್ ಬಾಲ್ ಜಿಸಿಎಲ್ (GCL) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಸಿಎಲ್ ಪ್ರಮುಖ ವಿಜಯ ಬಿ. ತಿಳಿಸಿದ್ದಾರೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 24ರಿಂದ 28ರವರೆಗೆ ಈ ಪಂದ್ಯಾವಳಿ ವಿಡಿಎಸ್ಟಿ ಮೈದಾನದಲ್ಲಿ ನಡೆಯಲಿದೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಸುಮಾರು 200 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ತಂಡಕ್ಕೆ ಬೇರೆ ಜಿಲ್ಲೆಯ ಮೂವರು ಆಟಗಾರರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಟೂರ್ನಿಯ ವಿಜೇತ ತಂಡಕ್ಕೆ ₹60,000 ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ ₹30,000, ಉತ್ತಮ ಬ್ಯಾಟ್ಸ್ಮನ್ ಮತ್ತು ಉತ್ತಮ ಬೌಲರ್ರಿಗೆ ತಲಾ ₹5,000 ನಗದು ಬಹುಮಾನ ನೀಡಲಾಗುವುದು. ಜೊತೆಗೆ ಸ್ಥಳೀಯ ಅತ್ಯುತ್ತಮ ಆಟಗಾರರಿಗೂ ವಿಶೇಷ ನಗದು ಪುರಸ್ಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗದಗ ಪರಿಸರದಲ್ಲಿ ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಈ ಟೂರ್ನಿ ಆಯೋಜಿಸಲಾಗಿದೆ. ನೆರೆಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಜಿಲ್ಲೆಯಲ್ಲಿ ಅವಕಾಶಗಳು ಕಡಿಮೆ. ಹೀಗಾಗಿ ಜಿಲ್ಲೆಯ ಆಟಗಾರರಿಗೆ ವೇದಿಕೆ ಕಲ್ಪಿಸಲು ಈ ಟೂರ್ನಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಅಸ್ಲಂ ಮುಧೋಳ, ಗಿರೀಶ ಹಡಪದ, ಶಿವರಾಜ ಕರಡಿ, ಸಿದ್ದು ಸಂಗನಾಳ ಮುಂತಾದವರು ಉಪಸ್ಥಿತರಿದ್ದರು.


