ಹರ್ಡೇಕರ ಮಂಜಪ್ಪನವರ ಸಾಧನೆ ಸ್ಮರಣೀಯ

0
shivanubhava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹರ್ಡೇಕರ ಮಂಜಪ್ಪನವರು ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಿಸಿದ ಮಹಾನುಭಾವರು. ಕನ್ನಡ ನಾಡು-ನುಡಿಗೆ ಹರ್ಡೇಕರ ಮಂಜಪ್ಪನವರ ಕೊಡುಗೆ ಅಪಾರ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ ೨೬೮೧ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹರ್ಡೇಕರ ಮಂಜಪ್ಪನವರು ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಜನರನ್ನು ಸಂಘಟಿಸಿ ಜಾಗೃತಿ ಮೂಡಿಸಿದ್ದಾರೆ. ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ಖಾದಿ, ಸಾಮಾಜಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆ ಸ್ಮರಣೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಶಿವಾನಿ ಅಶೋಕ ಆಸಂಗಿ, ವಚನ ಚಿಂತನೆಯನ್ನು ಹರ್ಷಿತಾ ಹನುಮಂತ ಏಕಬೋಟೆ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿದ್ದ ಶಾಂತಾದೇವಿ ಅಂದಾನೆಪ್ಪ ಗೌಡರ ಹಾಗೂ ಪರಿವಾರ ಗದಗ, ಲಿಂ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು, ಕಸಾಪ ದತ್ತಿ, ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ ಎಡೆಯೂರು, ಕಸಾಪ ದತ್ತಿ ಗದಗ ಅವರನ್ನು ಪೂಜ್ಯರು ಸಂಮಾನಿಸಿದರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

`ಹರ್ಡೇಕರ ಮಂಜಪ್ಪನವರ ಕೊಡುಗೆ’ ವಿಷಯದ ಕುರಿತು ಪ್ರೊ. ಎನ್.ಎಂ. ಪವಾಡಿಗೌಡ್ರ ಉಪನ್ಯಾಸ ನೀಡಿ, ಹರ್ಡೇಕರ ಮಂಜಪ್ಪನವರು, ಫ.ಗು. ಹಳಕಟ್ಟಿಯವರು ಇನ್ನೂ ಅನೇಕ ಮಹಿಮರು ಬಸವಣ್ಣನವರನ್ನು ಅಪ್ಪಿಕೊಂಡವರು. ಲಿಂಗಾಯತ ಅಂದರೆ ಎಲ್ಲವನ್ನೂ ಒಳಗೊಂಡಿದ್ದು, ವಿಶ್ವವು ಲಿಂಗದ ಆಕಾರದಲ್ಲಿದೆ. ವಿಶ್ವದಲ್ಲಿರುವ ಸಕಲ ಜೀವಾತ್ಮರಿಗೆ ಲೇಸನೇ ಬಯಸುವವರು ನಮ್ಮ ಕೂಡಲ ಸಂಗಮ ಶರಣರು. ಇಂತಹ ಲಿಂಗಾಯತ ತತ್ವವನ್ನು, ಜಾಗತಿಕತೆಯನ್ನು, ರಾಷ್ಟ್ರೀಯತೆಯನ್ನು ಒಪ್ಪಿಕೊಂಡ ಕನ್ನಡದ ಮನುಷ್ಯ ಹರ್ಡೇಕರ ಮಂಜಪ್ಪನವರು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here