ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಎಲ್ಲಾ ರೀತಿಯ ನಾಯಕತ್ವದಿಂದಲೂ ಕಡೆಗಣಿಸಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಮುನ್ನಡೆಸಲಿದ್ದಾರೆ. ಆದರೆ ಈ ಸರಣಿಯಲ್ಲಿ ಉಪನಾಯಕರಾಗಿ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಈ ಬದಲಾವಣೆಗೆ ಏನು ಕಾರಣ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು.
ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ಟೀಮ್ ಇಂಡಿಯಾ ನಾಯಕ ತೆರೆ ಎಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್ಗೆ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದೇ ವೇಳೆ ಮಾತನಾಡಿದ ಸೂರ್ಯ, ಅದೆಲ್ಲವೂ ಊಹಾಪೋಹ ಅಷ್ಟೇ. ನಾವಿಬ್ಬರೂ ಉತ್ತಮ ಗೆಳೆಯರು ಎಂದು ತಿಳಿಸಿದ್ದಾರೆ.
ನನ್ನ ಹಾಗೂ ಹಾರ್ದಿಕ್ ಪಾಂಡ್ಯ ಸಂಬಂಧ ನಿಜವಾಗಿಯೂ ಉತ್ತಮವಾಗಿದೆ. ನಾವು ಬಹಳ ಸಮಯದಿಂದ ಒಟ್ಟಿಗೆ ಆಡುತ್ತಿದ್ದೇವೆ. 2018 ರಿಂದ ನಾನು ಮುಂಬೈ ಇಂಡಿಯನ್ಸ್‌ಗೆ ಹಿಂತಿರುಗಿದಾಗ ಮತ್ತು ಇಂದಿನವರೆಗೂ ನಾವಿಬ್ಬರೂ ಫ್ರೆಂಡ್ಸ್ ರೀತಿಯಲ್ಲಿಯೇ ಇದ್ದೀವಿ. ಹೀಗಾಗಿ ಇದೀಗ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಕೇವಲ ವದಂತಿ ಎಂದು ತಿಳಿಸಿದ್ದಾರೆ.