HomeKarnataka Newsಸಾಮರಸ್ಯದ ಬದುಕು ಶಾಂತಿಗೆ ಮೂಲ: ರಂಭಾಪುರಿ ಶ್ರೀ

ಸಾಮರಸ್ಯದ ಬದುಕು ಶಾಂತಿಗೆ ಮೂಲ: ರಂಭಾಪುರಿ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಸವಕಲ್ಯಾಣ: ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಜೀವನದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸಗಳು ಬಹಳ ಮುಖ್ಯ. ನಂಬಿಕೆ ಕಳೆದುಕೊಂಡರೆ ಬಾಳು ಬರಡು. ನಂಬಿಕೆ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ. ಪರಸ್ಪರ ಸಾಮರಸ್ಯದಿಂದ ಬಾಳಿದರೆ ಎಲ್ಲೆಡೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆಗೆ ಹೋರಾಡಬೇಕಾದದ್ದು ಅನಿವಾರ್ಯ. ಒಳ್ಳೆಯದಕ್ಕಿಂತ ಕೆಟ್ಟದ್ದು ಬಹುಬೇಗ ಬೆಳೆದು ಅಷ್ಟೇ ಬೇಗ ನಾಶವಾಗುತ್ತದೆ. ಬೆಳಗುವ ಸೂರ್ಯನಿಗೆ ಮಣ್ಣು ಎರಚಿದರೆ ಅದು ಸೂರ್ಯನಿಗೆ ತಾಕುವುದಿಲ್ಲ. ಎರಚಿದವರ ಕಣ್ಣಲ್ಲಿ ಬೀಳುವುದೇ ಹೊರತು ಸಜ್ಜನರಿಗೆ ತಾಕುವುದಿಲ್ಲ. ಬಹು ಜನ್ಮಗಳ ಪುಣ್ಯದ ಫಲವಾಗಿರುವ ಈ ಮಾನವ ಜೀವನ ಸಾರ್ಥಕಪಡಿಸಿಕೊಳ್ಳುವುದು ಎಲ್ಲರ ಧ್ಯೇಯವಾಗಬೇಕು. ದಾರಿ ಚೆನ್ನಾಗಿದೆ ಎಂದು ತಪ್ಪು ದಾರಿ ತುಳಿದಾಗ ದಾರಿ ಸಾಗಬಹುದೇ ಹೊರತು ಮುಟ್ಟಬೇಕಾದ ಊರು ತಲುಪಲಾಗದು. ಗಾಳಿ ಬೀಸಿದತ್ತ ಹುಟ್ಟು ಹಾಕಿದರೆ ಹರಿಗೋಲು ಉಳಿಯಬಹುದೇ ಹೊರತು ಗುರಿ ಸೇರುವುದು ಕಷ್ಟ. ಸುಲಭವಾದದ್ದು ಶುಭಕರ ಆಗಲಾರದು. ಕಷ್ಟವೆನಿಸುವುದು ಸುಖದ ದಾರಿಗೆ ರಹದಾರಿಯಾಗಿದೆ.

ಮನುಷ್ಯನಿಗೆ ಆರೋಗ್ಯ ಬೇಕು. ಆದರೆ ಆರೋಗ್ಯ ಸೂತ್ರದ ಪರಿಪಾಲನೆ ಬೇಕಾಗಿಲ್ಲ. ವಿಶ್ವವಿದ್ಯಾಲಯದ ಪದವಿ ಬೇಕು. ಆದರೆ ಅಧ್ಯಯನ ಬೇಕಾಗಿಲ್ಲ. ಶಾಸನದ ರಕ್ಷೆ ಬೇಕು. ಆದರೆ ಶಾಸನದ ರಕ್ಷಣೆ ಬೇಕಾಗಿಲ್ಲ. ಧರ್ಮ ನೀಡುವ ಫಲ ಬೇಕು. ಆದರೆ ಧರ್ಮದ ಪರಿಪಾಲನೆ ಬೇಕಾಗಿಲ್ಲ. ಪೂಜಿಸುವ ಭಜಿಸುವ ದಾರಿ ಹಲವಾದರೂ ಸೇರುವ ಗುರಿ ಒಂದೇ ಎಂದು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಶರಣರ ಚಿಂತನ ಅರಿತು ಬಾಳಿದಾಗ ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸುಭಾಷ ಕಲ್ಲೂರ ಮಾತನಾಡಿ, ಭಾರತೀಯ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮ ಪರಂಪರೆಗಳು ಬೆಳೆದು ಬಂದಿವೆ. ಆಚರಿಸುವ ಹಬ್ಬಗಳು ಜನಜೀವನದ ಮೇಲೆ ಅಪಾರವಾದ ಪ್ರಭಾವ ಬೀರಿವೆ. ಈ ನಾಡಿನ ಸಂಸ್ಕೃತಿಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರುವುದು ಎಲ್ಲರ ಗುರಿಯಾಗಬೇಕು. ಹೃದಯ ಹಸನಗೊಂಡು ಮನಸ್ಸು ವಿಕಾಸಗೊಳ್ಳಬೇಕು. ಜನರ ಭಾವನೆಗಳು ವಿಕಾರಗೊಳ್ಳದೇ ವಿಕಾಸಗೊಳ್ಳಬೇಕು ಎಂದರು.
ಕಡಕೋಳ ಶ್ರೀ ಮಡಿವಾಳೇಶ್ವರಮಠದ ಡಾ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನಿರಗೂಡಿ ಹವಾಮಲ್ಲಿನಾಥ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಜೀವ ಜಗತ್ತಿಗೆ ವೀರಶೈವ-ಲಿಂಗಾಯತ ಧರ್ಮದ ಕೊಡುಗೆ ಕುರಿತು ಅದ್ಭುತ ಉಪನ್ಯಾಸ ನೀಡಿದರು. ದೇವಾಪುರ-ಸ್ಟೇಷನ್ ಬಬಲಾದನ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಬೀದರಿನ ಬಿ.ಜಿ. ಶೆಟ್ಟಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಾ ರುದ್ರನೂರ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಭಾಕರ ಕಳಮಾಸೆ ಭಾಗವಹಿಸಿದ್ದರು. ಬಸವಕಲ್ಯಾಣದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಜಡಗೆ ಸ್ವಾಗತಿಸಿದರು. ಗುರುಲಿಂಗಯ್ಯಾ ಹಿತ್ತಲಶಿರೂರ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ಶಿವಪೂರ ನಿರೂಪಿಸಿದರು. ಬಸವಕಲ್ಯಾಣದ ಮಲ್ಲಯ್ಯಾ ಸ್ವಾಮಿ ಹಿರೇಮಠ, ಶರಣಪ್ಪ ಬಿರಾದಾರ ತ್ರಿಪೂರಾಂತ ಇವರಿಂದ ಅನ್ನ ದಾಸೋಹ ಜರುಗಿತು.

ಧಾರ್ಮಿಕ ಮತ್ತು ಪಾರಂಪರಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!