ಹಾಸನ: ಮಾರಕಾಸ್ತ್ರಗಳಿಂದ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ. ದುಷ್ಯಂತ್ (40) ಹಲ್ಲೆಗೊಳಗಾದ ವಕೀಲನಾಗಿದ್ದು, ವಕೀಲ ವೃತ್ತಿಯೊಂದಿಗೆ, ಪರಿಚಯಸ್ತರಿಗೆ ಒಂದಿಷ್ಟು ಹಣವನ್ನ ಬಡ್ಡಿಗೆ ಕೊಟ್ಟಿದ್ದರಂತೆ. ತನ್ನ ವೃತ್ತಿ ಮುಗಿಸಿ ನೆನ್ನೆ ರಾತ್ರಿ ಮನೆಗೆ ಹೋರಟಿದ್ದ ಆ ವಕೀಲನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ವಕೀಲ ದುಷ್ಯಂತ್ ಮತ್ತು ಆತನ KA-46-L-4087 ನಂಬರ್‌ನ ಬೈಕ್ ರಸ್ತೆ ಬದಿ ಬಿದ್ದಿದ್ದನ್ನು ಕಂಡು ಸ್ಥಳೀಯರು ಈ ಪ್ರದೇಶದಲ್ಲಿ ಕಾಡಾನೆಗಳು ಹೆಚ್ಚಾಗಿದ್ದು ಯಾವುದೋ ಕಾಡಾನೆ ದಾಳಿಯಿಂದ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.
ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದನ್ನು ದೃಢಪಡಿಸಿಕೊಂಡ ಕೆಲವರು ಪೊಲೀಸರಿಗೆ ವಿಷಯ ಮುಟ್ಟಿಸಿ ಹಾಸನದ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರೋ ವಕೀಲನ ಸ್ಥಿತಿ ಚಿಂತಾದನಕವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.