ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಹಾಸನ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಜ.17ರಂದು ಹಾಸನ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿಯು ಹಿಂಬಾಲಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕಿ ಭಯಭೀತಳಾಗಿ ಓಡೋಡಿ ಮನೆ ಸೇರಿಕೊಂಡಿದ್ದಾಳೆ. ಆದರೆ ಅಷ್ಟರಲ್ಲೇ ನಿಲ್ಲದ ಆರೋಪಿ, ಬಾಲಕಿ ಮನೆಗೆ ತಲುಪಿದ ಬಳಿಕವೂ ಅಲ್ಲಿಂದ ತೆರಳದೆ, ಮನೆಯ ಗೇಟ್ ಹೊರಗೆ ನಿಂತು ಒಳಗೆ ಇಣುಕಿನೋಡಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪಾಲಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿತ್ತು.
ಘಟನೆ ಸಂಬಂಧ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಘಟನೆ ನಡೆದ ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಘಟನೆಯಿಂದಾಗಿ ಮಕ್ಕಳ ಸುರಕ್ಷತೆ ಕುರಿತಾಗಿ ಪೋಷಕರು ಗಂಭೀರ ಚಿಂತನೆ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



