ಹಾಸನ: ಹಾಸನದಲ್ಲಿ ನೆಲೆಸಿರೋ ಈ ಶಕ್ತಿದೇವತೆಯ ದೇವಸ್ಥಾನದ ಗರ್ಭಗುಡಿ ದ್ವಾರ ಬಾಗಿಲು ತೆರೆಯಲಾಗಿದೆ. ಇಂದಿನಿಂದ ನವೆಂಬರ್ 3ರವರೆಗೆ ದೇವಸ್ಥಾನ ಓಪನ್ ಇರಲಿದೆ. ಜಿಲ್ಲಾಡಳಿತ ಮತ್ತು ಅರ್ಚಕರ ಸಮ್ಮುಖದಲ್ಲಿ ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಜೊತೆ ಬಾಗಿಲನ್ನು ತೆರೆಯಲಾಯಿತು.
ಎರಡು ಕಡೆಯ ಪೂಜೆಗಾಗಿ ಪೂಜಾ ಸಾಮಾಗ್ರಿ, ಒಡವೆ, ದೇವಿಯ ಅಲಂಕಾರ ಸಾಮಾಗ್ರಿಗಳೊಂದಿಗೆ ಮುತ್ತೈದೆಯರ ಜೊತೆಗೆ ದೇಗುಲಕ್ಕೆ ಪ್ರವೇಶ ಮಾಡಲಾಯಿತು. ಗರ್ಭಗುಡಿ ಬಾಗಿಲು ತೆರೆಯುವ ಮೊದಲು ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಲಾಯಿತು. ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.