ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಹಿತ-ಮಿತ ನಿದ್ರೆ, ಒತ್ತಡ ನಿರ್ವಹಣೆ ಹಾಗೂ ಸ್ವಚ್ಛತೆ ಅವಶ್ಯವಾಗಿದೆ. ಮಕ್ಕಳು ಪ್ರತಿದಿನ ಶುಭ್ರ ಸ್ನಾನ, ಹಲ್ಲುಜ್ಜುವುದನ್ನು ಮಾಡುವುದರಿಂದ ಮನಸ್ಸು ಆನಂದ ಹಾಗೂ ಆರೋಗ್ಯದಿಂದ ಇರುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಹೇಳಿದರು.
ಅವರು ಗದಗ ಜಯೆಂಟ್ಸ್ ಗ್ರೂಪ್ಸ್ ಆಫ್ ಸಖಿ-ಸಹೇಲಿ ಸಂಘಟನೆಯಿಂದ ಗದುಗಿನ ರಾಜೀವ ಗಾಂಧಿ ನಗರದ ಸರ್ಕಾರಿ ಉರ್ದು ಶಾಲೆ ನಂ.4ರಲ್ಲಿ ಜರುಗಿದ `ಉತ್ತಮ ಆರೋಗ್ಯ’ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈತೊಳೆಯುವ ವಿಧಾನವು ಅನೇಕ ರೋಗಗಳಿಂದ ದೂರವಿರಬಹುದಾದ ಸಾಧನವಾಗಿದೆ. ಮಕ್ಕಳು ಊಟಕ್ಕೆ ಮೊದಲು ಕೈಗಳನ್ನು ಸರಿಯಾದ ಕ್ರಮಾನುಸಾರ ಸಾಬೂನು ಉಪಯೋಗಿಸಿ ಕನಿಷ್ಠ 30 ಸೆಕೆಂಡು ತೊಳೆಯಬೇಕು. ಇದಕ್ಕಾಗಿ ಮಕ್ಕಳಿಗೆ ಶಾಲೆ ಹಾಗೂ ಮನೆಯಲ್ಲಿ ಮಾರ್ಗದರ್ಶನ ನೀಡಿ ಕೈ ತೊಳೆಯಲು ಪ್ರೋತ್ಸಾಹಿಸಬೇಕು. ಅಂದಾಗ ಮಕ್ಕಳು ಸರಿಯಾದ ಕ್ರಮದಲ್ಲಿ ಆರೋಗ್ಯ ಜಾಗೃತಿಯತ್ತ ಸಾಗುವರು ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯವು ಪ್ರತಿಯೊಬ್ಬರ ಬದುಕಿನ ಮಧುರ ಕ್ಷಣ. ಬಾಲ್ಯದಲ್ಲಿಯೇ ಮಕ್ಕಳು ಸರಿಯಾದ ಜೀವನ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಹೇಳುವ ಹಿತನುಡಿಗಳನ್ನು ಮಕ್ಕಳು ಕೇಳಿ ತಿಳಿದು ಅವರು ಹೇಳಿದಂತೆ ನಡೆದರೆ ಬದುಕು ಆರೋಗ್ಯಮಯವಾಗಿರುತ್ತದೆ ಎಂದರು.
ಗದಗ ಜಯೆಂಟ್ಸ್ ಗ್ರೂಪ್ಸ್ ಆಫ್ ಸಖಿ-ಸಹೇಲಿ ಸಂಘಟನೆ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ನಮ್ಮ ಸಂಘಟನೆಯು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿದ್ದು, ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಸ್ವಚ್ಛತೆಯ ಕಡೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಇಂದು ವೈದ್ಯರಿಂದ ಕೈತೊಳೆಯುವ ಹಾಗೂ ಆರೋಗ್ಯಕರ ಶೈಲಿಗಳ ಕುರಿತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯೆ ಖೈರುನ್ನಿಸ್ಸಾ ದಾವಲಖಾನವರ ಮಾತನಾಡಿ, ಸಂಘ-ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಹಾಗೂ ಆರೋಗ್ಯಕರ ಜೀವನಕ್ಕಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ ಎಂದರು.
ರೇಖಾ ರೊಟ್ಟಿ ಪ್ರಾರ್ಥಿಸಿದರು. ಕಾರ್ಯದರ್ಶಿನಿ ಅಶ್ವಿನಿ ಮಾದಗುಂಡಿ ಸ್ವಾಗತಿಸಿದರು. ಚಂದ್ರಕಲಾ ಸ್ಥಾವರಮಠ ನಿರೂಪಿಸಿದರು. ಪ್ರಿಯಾಂಕಾ ಹಳ್ಳಿ ವಂದಿಸಿದರು. ಅನುರಾಧಾ ಅಮಾತ್ಯೆಗೌಡರ, ಪದ್ಮಾ ಕಬಾಡಿ, ಎನ್.ಎಚ್. ಜಕ್ಕಲಿ, ಐ.ಎ. ಗಾಡಗೋಳಿ, ಎಚ್.ಬಿ. ಮಕಾನದಾರ, ಎಸ್.ಎಸ್. ಬಳ್ಳಾರಿ, ಬಸವಣ್ಣೆವ್ವ ಮುಳ್ಳಾಳ, ಸಾವಿತ್ರಿ ಪಿಳ್ಳೆ, ಗೀತಾ ಮಹಾಕಾಳಿಮಠ, ಅರುಣಾ ಬನ್ನಿಗೋಳ ಸೇರಿದಂತೆ ಪಾಲಕ-ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಮಹಾಂತೇಶ ಸಜ್ಜನರ ಮಾತನಾಡಿ, ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಾಗಿದೆ. ಮಕ್ಕಳು ಸರಿಯಾಗಿ ಹಲ್ಲುಜ್ಜುವ ಕ್ರಮ, ಉತ್ತಮ ಜೀವನಶೈಲಿ ರೂಢಿಸಿಕೊಂಡು ಓದುವ ಸಮಯವನ್ನು ಸದ್ವಿನಿಯೋಗಪಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಹೇಳಿ, ಉತ್ತಮ ಆರೋಗ್ಯಕ್ಕಾಗಿ ಕೈತೊಳೆಯುವ ವಿಧಾನದ ಹಂತಗಳನ್ನು ಮಕ್ಕಳಿಗೆ ತಿಳಿಸಿದರು.