ಹಾವೇರಿ: ಚಿಟ್ಸ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ನುಂಗಿಹಾಕಿದ್ದ ವಂಚಕನೊಬ್ಬ ನ್ಯಾಯಾಲಯಕ್ಕೆ ಬರುವ ವೇಳೆ ಗ್ರಾಹಕರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಭಾರೀ ಹೈಡ್ರಾಮವೇ ನಡೆದಿದೆ.
ಎಸ್, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ‘ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್’ ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಗೊಂಡ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.
ಈಶ್ವರ ಚಿನ್ನಿಕಟ್ಟಿ ‘ಸಾಲೇಶ್ವರ ಪಟ್ಟ ಜ್ಯೋತಿ ಕ್ರೆಡಿಟ್ ಸಹಕಾರಿ’ ಹೆಸರಿನಲ್ಲಿ ಚಿಟ್ ಫಂಡ್ ನಡೆಸಿ, ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಚಿಟ್ ಫಂಡ್ ಕ್ಲೋಸ್ ಮಾಡಿ ಪರಾರಿಯಾಗಿದ್ದ ಈಶ್ವರ ಚಿನ್ನಿಕಟ್ಟಿ, ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ಕರೆತರುತ್ತಿದ್ದ ವೇಳೆ ವಿಷಯ ತಿಳಿದ ಸಂತ್ರಸ್ತರು ಕೋರ್ಟ್ ಬಳಿ ಆತನನ್ನು ಅಡ್ಡಗಟ್ಟಿದ್ದಾರೆ. ಪೊಲೀಸ್ ಜೀಪ್‌ನಿಂದ ಕೆಳಗಿಳಿಸಿ ನಡುರಸ್ತೆಯಲ್ಲೇ ವಂಚಕನನ್ನು ಮೆರವಣಿಗೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತರು, ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಚಿಟ್ ಫಂಡ್ಸ್ ಕಾಯ್ದೆ ಅಡಿಯಲ್ಲಿ ಈಶ್ವರ ಚಿನ್ನಿಕಟ್ಟಿ ವಿರುದ್ಧ ರಾಣೇಬೆನ್ನೂರು ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಮುಂದುವರಿದಿದೆ.



