ಹಾವೇರಿ:- ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೇ ಕತ್ತು ಕೊಯ್ದು ವ್ಯಕ್ತಿಯೋರ್ವ ಕೊಲೆಗೈದಿರುವ ಘಟನೆ ಹಾವೇರಿಯ ರಾಣೇಬೆನ್ನೂರು ಪಟ್ಟಣದಲ್ಲಿ ಜರುಗಿದೆ.
42 ವರ್ಷದ ಲಲಿತಾ ಬ್ಯಾಡಗಿ ಕೊಲೆಯಾದ ಮಹಿಳೆ. ಚಂದ್ರಪ್ಪ ಕೊಲೆಗೈದ ಆರೋಪಿ. ಮೂಲತಃ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿಯಾಗಿರುವ ಲಲಿತಾ, ರಾಣೆಬೆನ್ನೂರಲ್ಲಿ ಮನೆಗೆಲಸ ಮಾಡಿಕೊಂಡು ವಾಸಿಸುತ್ತಿದ್ದರು. 10 ವರ್ಷಗಳ ಹಿಂದೆ ಗಂಡ ಮೃತಪಟ್ಟ ನಂತರ ಅವರು ಒಬ್ಬರೇ ಜೀವನ ಸಾಗಿಸುತ್ತಿದ್ದರು. ಈ ನಡುವೆ ಹೋಟೆಲ್ ಕಾರ್ಮಿಕನಾಗಿದ್ದ ಚಂದ್ರಪ್ಪ ಎಂಬ ವ್ಯಕ್ತಿಯೊಂದಿಗೆ ಸುಮಾರು ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು.
ಕಳೆದ 15 ದಿನಗಳಿಂದ ಚಂದ್ರಪ್ಪ ಲಲಿತಾಳ ಕರೆ ಸ್ವೀಕರಿಸದೇ ದೂರವಾಗಿದ್ದ ಕಾರಣ, ಲಲಿತಾಳ ಫೋನ್ ನಿರಂತರ ಬ್ಯುಸಿ ಬರುತ್ತಿದೆ ಎಂಬ ಅನುಮಾನದಿಂದ ಇಬ್ಬರ ನಡುವೆ ಅಸಮಾಧಾನ ಹೆಚ್ಚಾಗಿತ್ತು. ಇದೇ ಹಿನ್ನೆಲೆಯಲ್ಲಿ ಡಿಸೆಂಬರ್ 7ರಂದು ಲಲಿತಾಳ ಮನೆಯಲ್ಲಿ ನಡೆದ ವಾಗ್ವಾದ ತೀವ್ರಗೊಂಡಿದ್ದು, ಚಾಕುವಿನಿಂದ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಘಟನೆಯ ನಂತರ ಪೊಲೀಸರು ಚಂದ್ರಪ್ಪನನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.
ರಾಣೆಬೆನ್ನೂರು ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



