ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ‘ಕೊಬ್ಬರಿ ಹೋರಿ’ ಕುರಿತು ಟ್ರೋಲ್ ಮಾಡಿದ ಆರೋಪದ ಹಿನ್ನೆಲೆ ಯುವಕನೊಬ್ಬನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾವೇರಿ ತಾಲೂಕಿನ ನಾಗಿನಮಟ್ಟಿ ಗ್ರಾಮದಲ್ಲಿ ನಡೆದಿದೆ.
ತುಡ್ನೂರು ಮೂಲದ ಮಧು ಎಂಬ ಯುವಕನ ಮೇಲೆ ಈ ಹಲ್ಲೆ ನಡೆದಿದ್ದು, NTC ಸರ್ಕಾರ್ ಹೋರಿ ಕುರಿತು ಕೆಟ್ಟದಾಗಿ ಟ್ರೋಲ್ ಮಾಡಿದ್ದಾನೆ ಎಂದು ಆರೋಪಿಸಿ ಕೆಲವರು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆಗೈದಿದ್ದಾರೆ ಎನ್ನಲಾಗಿದೆ.
ನಾಗಿನಮಟ್ಟಿಯಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಭಾಗವಹಿಸಲು ಬಂದಿದ್ದ ಮಧುವನ್ನು, ಹಬ್ಬ ಮುಗಿದ ಬಳಿಕ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
“ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದವನಿಗೆ ಪೂಜೆ ಆಗಿದೆ” ಎಂಬ ಶೀರ್ಷಿಕೆಯಿಂದ ವಿಡಿಯೋ ಹರಿದಾಡುತ್ತಿದ್ದು, ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



