ವಿವೇಕಿಗಳು ಎಂದಿಗೂ ಸೋಲುವುದಿಲ್ಲ : ಶಶಿಧರ ಮೂಲಿಮನಿ

0
He delivered a special lecture on Success and Sattvic Life at the 54th Shivanubhavasantha
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜ್ಞಾನ ಮತ್ತು ವಿವೇಕ ಎರಡಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇದನ್ನು ತಿಳಿದು ನಡೆಯುವುದೇ ಬದುಕು. ಇದನ್ನು ತಿಳಿದು ನಡೆದರೆ ಮನುಷ್ಯ ತನ್ನ ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾನೆ ಎಂದು ಉಪನ್ಯಾಸಕ ಶಶಿಧರ ಮೂಲಿಮನಿ ಹೇಳಿದರು.

Advertisement

ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ನಡೆದ 54ನೇ ಶಿವಾನುಭವಗೋಷ್ಠಿಯಲ್ಲಿ ಅವರು ಯಶಸ್ಸು ಮತ್ತು ಸಾತ್ವಿಕ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜ್ಞಾನಕ್ಕೆ ನಾನು ಸಾಧಿಸಿದೆ ಎಂಬ ಹಮ್ಮಿರುತ್ತದೆ. ಆದರೆ ವಿವೇಕಕ್ಕೆ ಈ ಹಮ್ಮು ಇರುವುದಿಲ್ಲ. ವಿವೇಕಿಗಳು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಆದರೆ ಜ್ಞಾನವು ಒಮ್ಮೊಮ್ಮೆ ಸೋಲುತ್ತದೆ. ಅದಕ್ಕೆ ಅದರ ಅಹಂಕಾರವೇ ಕಾರಣವಾಗುತ್ತದೆ. ಆದ್ದರಿಂದ ಜ್ಞಾನವಂತರಾಗುವುದರ ಜೊತೆಗೆ ಈ ಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ವಿವೇಕವನ್ನು ಹೊಂದುವುದೂ ಮುಖ್ಯವಾಗಿದೆ ಎಂದು ಹೇಳಿದರು.

ವಿವೇಕದಿಂದ ಬದುಕಿ ಈ ಜಗತ್ತನ್ನು ಬೆಳಗಿದ ಮೂವರು ಮಹನೀಯರು ನಮ್ಮ ಕಣ್ಣ ಮುಂದೆ ಆಗಿ ಹೋಗಿದ್ದಾರೆ. ಒಬ್ಬರು ದಾಸೋಹ ಯೋಗಿಗಳು ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳವರು, ಸಂಗೀತಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು ಮತ್ತು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳವರು. ಎಲ್ಲವೂ ನನಗೆ ತಿಳಿದಿದೆ ಎಂಬುದು ಜ್ಞಾನ, ಇನ್ನೂ ತಿಳಿಯುವುದು ಬಹಳಷ್ಟಿದೆ ಎಂಬುದು ವಿವೇಕ. ಇದರಲ್ಲಿ ಯಾವುದನ್ನು ನೀವು ಆಯ್ದುಕೊಳ್ಳುತ್ತೀರೋ ಅದರ ಮೇಲೆ ನಿಮ್ಮ ಬದುಕು ರೂಪುಗೊಳ್ಳುತ್ತದೆ. ಒಬ್ಬ ಮನುಷ್ಯ ಪರಿಪೂರ್ಣನಾಗಬೇಕೆಂದರೆ ಎರಡನ್ನೂ ಆಯ್ದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಫ್.ಎನ್. ಹುಡೇದ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಶಿಕ್ಷಕ ತೋಟಪ್ಪ ಆಡೂರ, ಪ.ಪಂ. ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಬಂಗಾರದ ಪದಕ ಪುರಸ್ಕೃತೆ ಪೂಜಾ ಗ್ರಾಮಪುರೋಹಿತ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ ಅವರನ್ನು ಶ್ರೀಗಳು ಸನ್ಮಾನಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ವೇದಿಕೆಯ ಮೇಲಿದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಪರಿಚಯಿಸಿದರು. ಪ್ರಾಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಶಿಕ್ಷಕ ಕೆ.ಐ. ಕೋಳಿವಾಡ ವಂದಿಸಿದರು.

ಶಿವಾನುಭವಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ದೇವ ಕೊಟ್ಟ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಸಾತ್ವಿಕ ಜೀವನದ ಮುಖ್ಯ ಲಕ್ಷಣ. ಪರಿಸರವನ್ನು ಕೆಡಿಸದೆ ಉಪಯೋಗಿಸಿ ಅದನ್ನು ಇತರರಿಗೂ ಉಪಯೋಗಿಸಲು ಬಿಡುವುದೂ ಸಹ ಸಾತ್ವಿಕ ಜೀವನವೇ. ಆದರೆ ಎಲ್ಲವನ್ನೂ ನಾನೇ ಉಪಯೋಗಿಸಿಕೊಂಡು, ಇದ್ದುದ್ದನ್ನು ಕೆಡಿಸಿ ಇತರರಿಗೆ ನೀಡುವುದು ಸ್ವಾರ್ಥವೆನ್ನಿಸಿಕೊಳ್ಳುತ್ತದೆ. ಸಂತೋಷವಾಗಿ ಬದುಕುವುದೇ ಯಶಸ್ಸು. ಭ್ರಮೆಯಿಂದ ಮನುಷ್ಯ ಸಾತ್ವಿಕತನವನ್ನು ಕಳೆದುಕೊಳ್ಳುತ್ತಾನೆ. ಪ್ರಪಂಚವನ್ನು ಕೆಡಿಸದಂತೆ ಬದುಕನ್ನು ಕಟ್ಟಿಕೊಳ್ಳಿ ಎಂದು ಶ್ರೀಗಳು ಹೇಳಿದರು.

 


Spread the love

LEAVE A REPLY

Please enter your comment!
Please enter your name here