ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ಸದ್ಯ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ಥೆ, ‘ನಾವು ಲವ್ ಮಾಡಿಲ್ಲ. ನನಗೆ ಅವನು ಬೆಸ್ಟ್ ಫ್ರೆಂಡ್ ಆಗಿದ್ದ. ಅದನ್ನೇ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅವನಿಗೆ ಮದುವೆ ಆಗಿ, ಮಗಳು ಇದ್ದಾಳೆ. ಅಂಥವನನ್ನು ನಾನು ಯಾಕೆ ಲವ್ ಮಾಡಲಿ? ಅತ್ಯಾಚಾರ ಮಾಡುವಾಗ ಅವನ ತಲೆಯಲ್ಲಿ ಬುದ್ಧಿ ಇರಲಿಲ್ಲವಾ? ಬೇರೆ ಯಾರೋ ನನ್ನ ಮೇಲೆ ಅತ್ಯಾಚಾರ ಮಾಡಿದ್ದರೆ ಮುಲಾಜಿಲ್ಲದೇ ದೂರು ನೀಡುತ್ತಿದ್ದೆ. ಆದರೆ ಮನು ನನ್ನ ಬೆಸ್ಟ್ ಫ್ರೆಂಡ್. ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಮದುವೆ ಆಗಿ ಮಗಳು ಇರುವವನು ನನ್ನ ಮೇಲೆ ಕೆಟ್ಟ ದೃಷ್ಟಿ ಬೀರಲ್ಲ ಅಂತ ನಾನು ನಂಬಿದ್ದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
‘ಅವನು ಏನೇನೋ ಮಾಡುತ್ತಿದ್ದ. ಮಾಟ ಮಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಅವನು ಮಾಡುತ್ತಿದ್ದ ರೀತಿ ನನಗೆ ಮಂಕು ಮಾಡಲು ಶುರು ಮಾಡಿತು. ಬೂದಿ ತಂದು ಮುಖಕ್ಕೆ ಎರಚುವುದು ಮತ್ತು ವಶೀಕರಣ ಮಾಡುತ್ತಿದ್ದ. ಅದರಿಂದ ನಾನು ಮಂಕಾದೆ. ಪದೇಪದೇ ಗರ್ಭಪಾತ ಆಯಿತು. ಒಂದು ಮಗು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದೆ. ಈಗ ಬೇಡ, 2 ವರ್ಷ ಬಿಟ್ಟು ಎಲ್ಲರಿಗೂ ಹೇಳೋಣ ಎಂದಿದ್ದ. ಹಿಂಸೆ ಕೊಟ್ಟು ಗರ್ಭಪಾತ ಮಾಡಿಸಿದ’ ಎಂದು ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ.
‘ತನ್ನ ಹೆಂಡತಿ ಸರಿ ಇಲ್ಲ, ಮನೆಯಲ್ಲಿ ಸಹಕರಿಸಲ್ಲ ಅಂತ ನನಗೆ ಹೇಳಿದ್ದ. ಈ ಮಾತಿಗೆ ಸಾಕ್ಷಿ ಇದೆ. ಇದೆನ್ನೆಲ್ಲ ಹೇಳಿ ನನ್ನನ್ನು ನಂಬಿಸಿದ. ಆಮೇಲೆ ಬೇಡ ಅಂದ. ನಾನೇನು ಆಟದ ಮೈದಾನವಾ ಅಂತ ಜೋರಾಗಿ ಜಗಳ ಮಾಡಿದೆ. ತನಗೆ ಆಂಟಿ ಸಹವಾಸ ಇದೆ ಅಂತ ಕೂಡ ಹೇಳಿದ್ದ. ನನಗೆ ಹೇಳಿದ ರೀತಿಯೇ ಬೇರೆ ಮಹಿಳೆಯರಿಗೂ ಹೇಳಿದ್ದಾನೆ. ಅದಕ್ಕೆ ಸಾಕ್ಷಿ ಇದೆ. ನ್ಯಾಯಾಲಯಕ್ಕೆ ನೀಡುತ್ತೇನೆ’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.
‘ಕಾರ್ಯಕ್ರಮದ ಹಣ ನೀಡಲು ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಏನು ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ. ಯಾಕೆಂದರೆ ಅವನು ನನ್ನ ಫ್ರೆಂಡ್. ಮಾಡಿದ ತಪ್ಪಿಗೆ ಸಮಾಧಾನ ಮಾಡುತ್ತೇನೆ ಎಂದಿದ್ದ. ಕಣ್ಣು ಮುಚ್ಚಿಕೋ, ನಿನಗೆ ಸರ್ಪ್ರೈಸ್ ನೀಡುತ್ತೇನೆ ಎಂದ. ಕಣ್ಣು ಮುಚ್ಚಿಕೊಂಡಾಗ ತಾಳಿ ಕಟ್ಟಿದ. ಅತ್ಯಾಚಾರ ಮಾಡಿ, ತಾಳಿ ಕಟ್ಟಿದರೆ ಇದಕ್ಕೆ ಏನು ಬೆಲೆ ಇದೆ ಅಂತ ನಾನು ಕೇಳಿದೆ. ತನ್ನ ತಂದೆ ಮತ್ತು ತಾತನಿಗೆ ಇಬ್ಬರು ಹೆಂಡತಿಯರು. ಹಾಗಾಗಿ ತನಗೂ ಇಬ್ಬರು ಹೆಂಡತಿಯರು ಎಂದ. ನನ್ನನ್ನು ರಾಣಿ ಥರ ನೋಡಿಕೊಳ್ಳುವುದಾಗಿ ಹೇಳಿದ. ಅದನ್ನು ನಾನು ಒಪ್ಪಿಕೊಳ್ಳಲಿಲ್ಲ’ ಎಂದಿದ್ದಾರೆ ಸಂತ್ರಸ್ಥ ಮಹಿಳೆ.
‘ಮಡೆನೂರು ಮನುಗಾಗಿ ನಾನೇ ಸಾಕಷ್ಟು ಹಣ ಖರ್ಚು ಮಾಡಿದ್ದೀನಿ. ಮನು ಜಿಮ್ಗೆ ಹೋಗಲು ನಾನೇ ದುಡ್ಡು ಕೊಟ್ಟಿದ್ದೇನೆ. ಮುಂದಿನ ಸಿನಿಮಾ ತಮನ್ನಾ ಜೊತೆ ಎಂದು ಅವನು ಹೇಳಿಕೊಳ್ಳುತ್ತಿದ್ದ. ನೀನು ದಪ್ಪ ಇದಿಯ ಎಂದು ಹೀಯಾಳಿಸ್ತಿದ್ದ. ಡ್ರಿಂಕ್ಸ್ ತಂದು ನನಗೂ ಕುಡಿಸಿ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ನನಗೆ ಹುಷಾರಿಲ್ಲ ಅಂತ ಗೊತ್ತಿದ್ರೂ ಯೋಗಕ್ಷೇಮ ವಿಚಾರಿಸಲಿಲ್ಲ. ಬ್ಲಾಕ್ ಮೇಲ್ ಮಾಡಲು ಹೀಗೆಲ್ಲ ವಿಡಿಯೋ ಮಾಡಿಕೊಂಡ. ಇದನ್ನೆಲ್ಲ ಮಾಡಿದ್ದಾನೆ ಎಂದರೆ ಅವನ ಮನದಲ್ಲಿ ಎಷ್ಟು ಕ್ರೈರ್ಯ ಇರಬಹುದು. ಇದಕ್ಕಾಗಿ ನಾನು ದೂರು ನೀಡಿದ್ದೇನೆ ಎಂದು ಸಂತ್ರಸ್ಥ ಮಹಿಳೆ ಅಳಲು ತೋಡಿಕೊಂಡಿದ್ದಾರೆ.