ಗದಗ: ಮುಖ್ಯ ಶಿಕ್ಷಕಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ನಡೆದಿದೆ. ಅನ್ನಪೂರ್ಣ ರಾಠೋಡ್ (55) ಕೊಲೆಯಾದ ಮುಖ್ಯ ಶಿಕ್ಷಕಿಯಾಗಿದ್ದು,
ಮನೆಯಲ್ಲಿದ್ದ ಮುಖ್ಯ ಶಿಕ್ಷಕಿಯ ತಲೆಗೆ ದುಷ್ಕರ್ಮಿಗಳು ರೊಟ್ಟಿ ಮಾಡುವ ಕಟ್ಟಿಗೆಯ ಕ್ವಾಮಣಗಿಯಿಂದ ಹೊಡೆದು ಭೀಕರ ಕೊಲೆ ಮಾಡಿದ್ದು, ಇದರಿಂದಾಗಿ ಕ್ವಾಮಣಗಿ ತುಂಡು ತುಂಡಾಗಿ ಬಿದ್ದಿದೆ.
ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಮಾಧ್ಯಮಿಕ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಅನ್ನಪೂರ್ಣ ರಾಠೋಡ್ ಗ್ರಾಮದಲ್ಲಿ ಎಸ್‌ಡಿಎಮ್ ಸಿ ಸಮಿತಿ ಕೆಲವರ ಜೊತೆಗೆ ಭಿನ್ನಾಭಿಪ್ರಾಯದ ಕಾರಣದಿಂದಾಗಿ ರೋಣ ಬಿಇಒ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಕುಟಂಬಸ್ಥರು ಆರೋಪಿಸಿದ್ದಾರೆ. ಕೊಲೆಗೆ ಇದು ಕೂಡ ಕಾರಣ ಎಂದು ಅವರು ಹೇಳಿದ್ದಾರೆ.
ಸದ್ಯ ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರಿಯಾಗಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸುದ್ದಿ ತಿಳಿದು ಗಜೇಂದ್ರಗಡ ನಿವಾಸಿಗಳು ಆತಂಕಗೊಂಡಿದ್ದು, ಘಟನಾ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.