ರೋಟರಿ ಕ್ಲಬ್‌ನಿಂದ ಆರೋಗ್ಯ ಜಾಗೃತಿ, ಬಿಸಿಯೂಟದ ತಟ್ಟೆಗಳ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರಿ ಶಾಲೆಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಶಿಸ್ತು, ನೈತಿಕತೆ ಹಾಗೂ ವೈಯುಕ್ತಿಕ ಬೆಳವಣಿಗೆಗೂ ಒತ್ತು ನೀಡುತ್ತಿವೆ. ಸಮುದಾಯದ ಸಹಕಾರವು ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಹೇಳಿದರು.

Advertisement

ಅವರು ಗುರುವಾರ ಗದಗ-ಬೆಟಗೇರಿ ರೋಟರಿ ಕ್ಲಬ್‌ನಿಂದ ಗದಗ ರಂಗನವಾಡಿಯ ಸರಕಾರಿ ಶಾಲೆ ನಂ. ೧೧ರಲ್ಲಿ ಜರುಗಿದ ಮಕ್ಕಳ ಆರೋಗ್ಯ ಜಾಗೃತಿ ಹಾಗೂ ಶಾಲೆಗೆ ಬಿಸಿಯೂಟದ ತಟ್ಟೆಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಿಸಿಯೂಟವು ಪರಿಣಾಮಕಾರಿ ಹಾಗೂ ಉಪಯುಕ್ತ ಯೋಜನೆಯಾಗಿದೆ. ಮಕ್ಕಳಲ್ಲಿಯ ಅಪೌಷ್ಠಿಕತೆ ತಡೆದು ಆರೋಗ್ಯ ವೃದ್ಧಿ ಮಾಡುತ್ತದೆ. ಇದರಿಂದಾಗಿ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣದ ನಿರ್ಮಾಣವಾಗಿದೆ. ಗದಗ-ಬೆಟಗೇರಿ ರೋಟರಿ ಕ್ಲಬ್ ಮಕ್ಕಳಿಗೆ ಊಟಕ್ಕಾಗಿ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದ್ದು, ಕ್ಲಬ್‌ನ ಕಾರ್ಯ ಪ್ರಶಂಸನೀಯ ಎಂದರು.

ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ರೇವಣಸಿದ್ದೇಶ್ವರ ಉಪ್ಪಿನ ಮಾತನಾಡಿ, ಉತ್ತಮ ಆರೋಗ್ಯ ಮನುಷ್ಯನ ಸದೃಢತೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಸರಿಯಾದ ಕ್ರಮದಲ್ಲಿ ಎರಡು ಹೊತ್ತು ಹಲ್ಲುಜ್ಜುವದು, ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮಗಳಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಜೊತೆಗೆ ಓದು-ಬರಹದಲ್ಲಿ ದೃಢತೆಯಿಂದ ಮುನ್ನಡೆಯಬೇಕು ಎಂದರು.

ರೋಟರಿ ವೇಲ್ಪೇರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಗಾಗಿ ಸಮುದಾಯವು ಪಾಲ್ಗೊಳ್ಳಬೇಕಾಗಿದೆ. ಪೋಷಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಇತ್ತ ಒಲವು ತೋರಬೇಕು. ಜೊತೆಗೆ ಸಮಾಜವು ನಮ್ಮ ಜವಾಬ್ದಾರಿಯನ್ನು ಅರಿತು ಶಾಲೆಗಳ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ಗದಗ-ಬೆಟಗೇರಿ ರೋಟರಿ ಕ್ಲಬ್ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕೈ ಜೋಡಿಸಿದೆ ಎಂದರು.

ವೇದಿಕೆಯ ಮೇಲೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಂ.ಆರ್. ಕರಮುಡಿ, ಕ್ಲಬ್‌ನ ಕಾರ್ಯದರ್ಶಿ ಸಂತೋಷ ಅಕ್ಕಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಕಾಮತ ಉಪಸ್ಥಿತರಿದ್ದರು. ಐಮನ್ ಕೊಪ್ಪಳ ಹಾಗೂ ಸಫೀನಾ ಸರಗಿ ಪ್ರಾರ್ಥಿಸಿದರು. ರಾಧಿಕಾ ಮಡಿವಾಳರ ವಚನ ಪ್ರಾರ್ಥನೆ ಮಾಡಿದಳು. ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಬಿ. ಹೊಸಮನಿ ನಿರೂಪಿಸಿದರು. ಎಂ.ವೈ. ಕೊಳ್ಳಿಯವರ ವಂದಿಸಿದರು.

ಗದಗ-ಬೆಟಗೇರಿ ರೋಟರಿ ಕ್ಲಬ್‌ನಿಂದ ೬೦ ಊಟದ ಸ್ಟೀಲ್ ತಟ್ಟೆಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ಶಾಲೆಯ ವತಿಯಿಂದ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಮೌಲ್ಯಗಳ ಬೆಳವಣಿಗೆ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ-ಸಿರಿತನ ಇವುಗಳ ನೈಜ ಬದುಕಿನ ಅನುಭವದೊಂದಿಗೆ ಜೀವನ ಶಿಕ್ಷಣವು ಬೆಳೆದು ಬರುತ್ತದೆ. ಹೀಗಾಗಿ ಸರಕಾರಿ ಶಾಲೆಗಳು ಮಕ್ಕಳ ಅಭಿವೃದ್ಧಿಯ ಸಂಕೇತಗಳಾಗಿವೆ ಎಂದರು.

 


Spread the love

LEAVE A REPLY

Please enter your comment!
Please enter your name here