ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಆಸ್ತಿ-ಪಾಸ್ತಿ, ಧನ-ಕನಕಾದಿಗಳ ಸಂಪತ್ತನ್ನು ನಾವು ವ್ಯವಹಾರಿಕವಾಗಿ ಗಳಿಸಬಹುದು. ಆದರೆ ಆರೋಗ್ಯ ಸಂಪತ್ತನ್ನು ಗಳಿಸಲು ನಾವು ಸ್ವತಃ ಸಾಧನೆ ಮಾಡಬೇಕಾಗುತ್ತದೆ. ಸಾಧನೆ ಸಾಕಷ್ಟಿದ್ದರೂ ಸೂರ್ಯನಮಸ್ಕಾರ ಸಾಧನೆ ಸರ್ವಶ್ರೇಷ್ಠವಾಗಿದೆ ಎಂದು ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಮತ್ತು ಯೋಗ ಚಿಂತನ ಕೂಟ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ರಥಸಪ್ತಮಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಮತ್ತು ಸೂರ್ಯಾಷ್ಟೋತ್ತರ ಶತನಾಮಾವಳಿ ಪಠಣ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸೂರ್ಯ ನಮಸ್ಕಾರವು ಯೋಗದ ಪ್ರಕ್ರಿಯೆಗಳಾದ ಆಸನ, ಪ್ರಾಣಾಯಾಮ, ಧ್ಯಾನ, ಮಂತ್ರ ಪಠಣಗಳ ಸಂಯೋಜನೆಯುಕ್ತ 12 ಹಂತಗಳ ವ್ಯಾಯಾಮ ಪದ್ಧತಿಯಾಗಿದೆ. ಆಧ್ಯಾತ್ಮಿಕವಾಗಿ ಸೂರ್ಯದೇವನಿಗೆ ವಂದನೆ ಸಲ್ಲಿಸುವುದು ಧಾರ್ಮಿಕ ಆಚರಣೆಯಾಗಿದೆ. ಈ ಸೂರ್ಯನಮಸ್ಕಾರ ಸಾಧನೆಯಿಂದ ನಾವು ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಾಗಿರಬಹುದು. ಹೀಗಾಗಿ ಸೂರ್ಯ ನಮಸ್ಕಾರ ಸಾಧನೆ ಆರೋಗ್ಯ ಭಾಗ್ಯದ ಅಡಿಪಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಸೂರ್ಯಾಷ್ಟೋತ್ತರ ಶತನಾಮಾವಳಿಯನ್ನು ಪಠಣ ಮಾಡಿಸಿ ಯೋಗ ಗಾರುಡಿಗರಾದ ಮಾಳಾಡಿಹಳ್ಳಿ ದಿ. ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ ಸೂರ್ಯನಮಸ್ಕಾರ ಸಾಧನೆಯನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಇ. ಪ್ರಶಾಂತ, ಜಯಶ್ರೀ ಡಾವಣಗೇರಿ, ವೀಣಾ ಗೌಡರ, ರೇಷ್ಮಾ ಹಡಪದ, ಗಿರಿಜಾ ಅಂಗಡಿ ಸೇರಿದಂತೆ ಯೋಗಪಾಠಶಾಲೆಯ ಸದಸ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆದವು. ಷಡಕ್ಷರಿ ಮೆಣಸಿನಕಾಯಿ ಸರ್ವರನ್ನು ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಾಳೆದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿ ಹುಡೇದ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಐಹೊಳ್ಳಿ ವಂದಿಸಿದರು.
ಎಲ್.ಟಿ.ಎಂ.ಎಸ್ ಹೆಸ್ಕಾಂನ ಅಸಿಸ್ಟಂಟ್ ಇಂಜಿನಿಯರ್ ಸುನಿತಾ ಓಲಿ ರಥಸಪ್ತಮಿ ದಿನ ಪ್ರಾರಂಭಿಸಿದ ಕಾರ್ಯಗಳ ಫಲ ಏಳು ಪಟ್ಟು ಹೆಚ್ಚುವದೆಂದು ತಿಳಿಸಿದರು. ರಥಸಪ್ತಮಿ ಮತ್ತು ಸೂರ್ಯನಮಸ್ಕಾರ ಕುರಿತು ಅಶೋಕ ಬಾರಕೇರ, ವಿಜಯಲಕ್ಷ್ಮೀ ಆನೆಹೊಸೂರ, ಮಂಜುಳಾ ಬುಳ್ಳಾ, ವಿಜಯಾ ಚನ್ನಶೆಟ್ಟಿ, ಗೌರಿ ಜಿರಂಕಳಿ ಮಾತನಾಡಿದರು. ವೀಣಾಶ್ರೀ ಮಾಲಿಪಾಟೀಲ ಸೂರ್ಯ ದೇವರ ಮಹತ್ವ ತಿಳಿಸುವ ಗೀತೆ ಹಾಡಿದರು.



