ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಹಾಗೂ ಹಿರಿಯ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯುತ್ತಿದ್ದ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಮಾರ್ಚ್ 24ರಂದು ಜ್ವರ ಹಾಗೂ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಳೆದ ಏಳು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಯ ಮುಖ್ಯಸ್ಥ ಡಾ. ಅಜಯ್ ಸ್ವರೂಪ್ ಮಾಹಿತಿ ನೀಡಿದ್ದು, ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರು ಹಲವು ವರ್ಷಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ ದೆಹಲಿಯ ವಾಯುಮಾಲಿನ್ಯದಿಂದ ಅಸ್ತಮಾ ಲಕ್ಷಣಗಳು ಹೆಚ್ಚಾಗಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
79 ವರ್ಷದ ಸೋನಿಯಾ ಗಾಂಧಿ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು, 2025ರ ಜೂನ್‌ನಲ್ಲಿ ಹೊಟ್ಟೆ ಸೋಂಕಿನ ಕಾರಣಕ್ಕೂ ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೂ ತೆರಳಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ.



