ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸದೃಢ ಕುಟುಂಬಕ್ಕೆ ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಮುಖ್ಯ ಎಂದು ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಹೇಳಿದರು.
ಅವರು ಪಟ್ಟಣದ ಸಮೀಪದ ಕುರ್ತಕೋಟಿ ಗ್ರಾಮದ ಅಂಗನವಾಡಿ ಸಂಖ್ಯೆ 296ರಲ್ಲಿ, ಕುರ್ತಕೋಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಜರುಗಿದ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಹಾಗೂ ಪೋಷಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕುಟುಂಬದ ಮಹಿಳೆ ಆರೋಗ್ಯದಿಂದಿದ್ದರೆ ಪರಿವಾರ ಸಂಪೂರ್ಣ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರತಿಯೊಬ್ಬ ಮಹಿಳೆಯೂ ಸದುಪಯೋಗಪಡಿಸಿಕೊಂಡು ಸದೃಢ ಪರಿವಾರ ಹೊಂದಿದಲ್ಲಿ ಸದೃಢ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ.
ಮಹಿಳೆಯರ ಆರೋಗ್ಯದಲ್ಲಿ ಏರುಪೇರುವಾದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಗುಣಮಟ್ಟದ ಪೌಷ್ಟಿಕ ಆಹಾರವನ್ನು ನಿತ್ಯ ಸೇವಿಸಬೇಕು ಎಂದರು.
ಕುರ್ತಕೋಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಕ್ರಂಸಿಂಗ್ ರಾಠೋಡ, ಸಿಡಿಪಿಒ ಹುಲಿಗೆಮ್ಮ ಜೋಗೆರ, ಕಾವೇರಿ ಚಿಗರು, ಮದುಶ್ರೀ, ವಿಜಯಲಕ್ಷ್ಮಿ ಹಿರೇಮಠ, ಮಂಗಳಾ ಕೆಂಭಾವಿಮಠ, ರೇಣುಕಾ ಬಜಪ್ಪನವರ, ವಿನೋದಾ ಹೊಂಬಳ, ರೇಣುಕಾ, ಎಸ್.ಎನ್. ಮಾದಪ್ಪನವರ, ದೇವಕ್ಕಾ ಹೂಗಾರ, ಶಾರದಾ ಹನಕನಹಳ್ಳಿ, ಶೋಭಾ ಕಮ್ಮಾರ, ಶೋಭಾ ಕೆಂಚಣ್ಣವರ, ಶೋಭಾ ಮುಳಗುಂದ ಮುಂತಾದವರು ಹಾಜರಿದ್ದರು.