ಗಾಂಧೀನಗರ: ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್ನಲ್ಲಿ ನಡೆದಿದೆ.
ಬಲ್ಮುಕುಂದ್ ಖೇತಾನ್, ಅವರ ಪತ್ನಿ ಪ್ರಿಯಾಂಕಾ ಹಾಗೂ ಹಿರಿಯ ಮಗಳು ಭವ್ಯಾ ಮೃತಪಟ್ಟಿದ್ದಾರೆ. ಏಳು ವರ್ಷದ ಕಿರಿಯ ಮಗಳು ಪೃಥ್ವಿ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ತನಿಖೆಯಲ್ಲಿ ಆರ್ಥಿಕ ದುರುಪಯೋಗದ ಅಂಶಗಳು ಬೆಳಕಿಗೆ ಬಂದಿವೆ. ಮೃತರು ಬರೆದಿಟ್ಟಿರುವ ಮೂರು ಪುಟಗಳ ಪತ್ರದಲ್ಲಿ ವೈಭವ್ ರುಂಗ್ತಾ ಎಂಬಾತ ಖೇತಾನ್ ಅವರ ಕ್ರೆಡಿಟ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಆರೋಪಿಯು ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ನಿರಂತರ ಮಾನಸಿಕ ಮತ್ತು ಆರ್ಥಿಕ ಒತ್ತಡದಿಂದ ಕುಟುಂಬ ಈ ದುರ್ಘಟನೆಗೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಮಕ್ಕಳಿಗೆ ವಿಷಾಹಾರ ನೀಡಿ ಬಳಿಕ ದಂಪತಿ ತಾವೂ ಸೇವಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಿಸಿದರೂ ಮೂವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.



