ಗದಗ: ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಆಗಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ಸರಿಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಗ್ರಾಮದಲ್ಲಿ ಹಿಮಪಾತದಂತೆಯೇ ದೃಶ್ಯ ನಿರ್ಮಾಣವಾಗಿತ್ತು. ರಸ್ತೆಗಳು ಮತ್ತು ಮನೆಗಳ ಮುಂದೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಪರಿಸರ ಸಂಪೂರ್ಣವಾಗಿ ಬಿಳಿಮಯವಾಗಿತ್ತು.
ಈ ಅಪರೂಪದ ದೃಶ್ಯಗಳನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಗ್ರಾಮಸ್ಥರು ಒಂದೆಡೆ ಸಂತಸಗೊಂಡರೆ, ಮತ್ತೊಂದೆಡೆ ರೈತರು ಅಪಾರ ಪ್ರಮಾಣದ ಮೇವು, ಹೊಟ್ಟು ನೀರುಪಾಲಾಗಿ ಸಂಕಷ್ಟಕ್ಕೀಡಾಗಿದ್ದಾರೆ.



