ವಿಜಯಸಾಕ್ಷಿ ಸುದ್ದಿ, ರೋಣ: ಡಿ.15ರಂದು ರೋಣ ಮತಕ್ಷೇತ್ರದ 200 ಕೋಟಿ ರೂಗಳ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುರಸಭಾ ಸದಸ್ಯ ಸಂಗನಗೌಡ ಪಾಟೀಲ ಸ್ಥಳದಲ್ಲಿಯೇ ಬಿಡಾರ ಹೂಡಿದ್ದು, ಸಮಾವೇಶದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಬುಧವಾರ ಬೆಳಗಿನ ಜಾವ ಪುರಸಭಾ ಸದಸ್ಯ ಸಂಗನಗೌಡ ಪಾಟೀಲ ಸಮಾವೇಶ ಜರುಗುವ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ ಕೆ., ಲೋಕೋಪಯೋಗಿ ಇಲಾಖೆಯ ಇಇ ಬಲರಾಮ್ ನಾಯಕ ಸ್ಥಳದಲ್ಲಿದ್ದು ಅವರಿಗೆ ಸಾಥ್ ನೀಡಿದರು. ಈಗಾಗಲೇ ಬೃಹತ್ ಶಾಮಿಯಾನ ಹಾಕುವ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು, ಇದನ್ನು ವೀಕ್ಷಿಸಿದ ಸದಸ್ಯ ಸಂಗನಗೌಡ ಪಾಟೀಲ ಸಮಾವೇಶಕ್ಕೆ ಆಗಮಿಸುವ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಾವೇಶದ ಸ್ಥಳದಲ್ಲಿ ನೀರಿನ ವ್ಯವಸ್ಥೆಯಾಗಬೇಕು ಎಂದರು.
ಮುಖ್ಯಮಂತ್ರಿಗಳು ಡಿ ಪೌಲ್ ಶಾಲೆ ಆವರಣದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್‌ನಿಂದ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ. ಸಾರ್ವಜನಿಕರ ಪ್ರವೇಶಕ್ಕೆ ಕ್ರೀಡಾಂಗಣದ ಮುಖ್ಯ ದ್ವಾರವನ್ನು ಬಳಕೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರುಗಳಿಗೆ ತಹಸೀಲ್ದಾರ್ ಕಚೇರಿಯ ಒಳಾವರಣದ ಮೂಲಕ ಸಮಾವೇಶಕ್ಕೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಈ ಕಾಮಗಾರಿಯನ್ನು ವೀಕ್ಷಿಸಿದ ಸಂಗನಗೌಡ ಪಾಟೀಲ ಅಧಿಕಾರಿಗಳ ಜೊತೆ ಚರ್ಚಿಸಿದರು. ಒಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿರುವ ದೃಶ್ಯಗಳು ಸಮಾವೇಶದ ಸ್ಥಳದಲ್ಲಿ ಕಂಡು ಬಂದವು.
ತಹಸೀಲ್ದಾರ್ ನಾಗರಾಜ ಕೆ, ಇಇ ಬಲರಾಮ್ ನಾಯಕ, ಸಂಗು ನವಲಗುಂದ, ಆನಂದ ಚಂಗಳಿ, ಅಪ್ಪು ಗಿರಡ್ಡಿ, ಖಾಧಿರಸಾಬ ಸಂಕನೂರ, ಅಭಿಷೇಕ ನವಲಗುಂದ, ಅಸ್ಲಂ ಕೊಪ್ಪಳ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.