ಬೆಳಗಾವಿಯಲ್ಲಿ ಧಾರಾಕಾರ ಮಳೆ: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ!

0
Spread the love

ಬೆಳಗಾವಿ:– ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದೆ.

Advertisement

ಸುಡುಬಿಸಿಲಿನ ಬೇಗೆಗೆ ಬೆಂದಿದ್ದ ಸವದತ್ತಿ ಜನರಿಗೆ ಮಳೆರಾಯ ತಂಪೆರಿದಿದ್ದಷ್ಟೇ ಅಲ್ಲಾ, ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ರಭಸವಾಗಿ ಸುರಿದ ಧಾರಾಕಾರ ಮಳೆಗೆ ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆಗಳು ಹಳ್ಳಗಳಿಂದ ಜಲಾವೃತಗೊಂಡು ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರೋ ಭಕ್ತರು ದೇವಿಯ ದರ್ಶನವಿಲ್ಲದೇ ಪರದಾಡಿದ್ದಾರೆ.

ನೂಲಹುಣ್ಣಿಮೆ ಹಿನ್ನೆಲೆ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ. ಹಾಗಾಗಿ ಯಲ್ಲಮ್ಮನ ಗುಡ್ಡಕ್ಕೆ ಮಹಾರಾಷ್ಟ್ರ, ಗೋವಾ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಮೂಲೆಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ.

ಆದರೆ ಉಗರಗೋಳದಲ್ಲಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಭಕ್ತರು ಪರದಾಡಿದ್ದರು. ಅಷ್ಟೇ ಅಲ್ಲದೇ ಉಗರಗೋಳ ಗ್ರಾಮದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬೈಕ್ ರಕ್ಷಣೆಗೆ ವ್ಯಕ್ತಿಯೊಬ್ಬರು ಹರಸಾಹಸ ಪಟ್ಟಿದ್ದಾರೆ. ಜೊತೆಗೆ ಯಲ್ಲಮ್ಮನ ಗುಡ್ಡದ ಎಣ್ಣೆ ಹೊಂಡದಲ್ಲಿ ರಭಸವಾಗಿ ಹರಿಯುತ್ತಿರುವ ಮಳೆಯ ನೀರಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದರು.

ಇನ್ನು, ಸವದತ್ತಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಸಹ್ಯಾದ್ರಿ-ಕೊಡಚಾದ್ರಿಯನ್ನೇ ಮೀರಿಸುವಂತೆ ಸುಕ್ಷೇತ್ರ ಯಮ್ಮಲ್ಲನ ಗುಡ್ಡದ ಸುತ್ತಮುತ್ತಲಿನ ಪ್ರದೇಶ ನಿರ್ಮಾಣವಾಗಿದೆ. ಬೆಟ್ಟ-ಕಲ್ಲುಬಂಡೆಗಳ ಮೇಲೆ ಎಲ್ಲೆಂದರಲ್ಲಿ ಸುಂದರ ಕಿರುಜಲಪಾತಗಳು ಸೃಷ್ಟಿಯಾಗಿದ್ದು, ಬೆಟ್ಟದಿಂದ ನೀರು ಜಾರಿ ದುಮ್ಮಿಕ್ಕುತ್ತಿದೆ. ಬೆಟ್ಟದಿಂದ ಜಾರುವ ನೀರ್ಝರಿಗಳ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮತ್ತೊಂದೆಡೆ ಯಲ್ಲಮ್ಮನ ಗುಡ್ಡದಲ್ಲಿ ಭಾರಿ ಮಳೆಗೆ ಎಣ್ಣೆಹೊಂಡ ಸಂಪೂರ್ಣ ಜಲಾವೃತಗೊಂಡರೆ, ಧಾರಾಕಾರ ಮಳೆಯ ನೀರು ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ನುಗ್ಗಿದೆ. ದೇವಸ್ಥಾನ ಕೌಂಟರ್‌ಗಳು, ದೇವಸ್ಥಾನ ಗರ್ಭಗುಡಿ ಹೀಗೆ ದೇವಸ್ಥಾನ ಸುತ್ತಲೂ ಮಳೆ ನೀರು ಆವರಿಸಿಕೊಂಡಿದೆ. ಉತ್ತರ ಕರ್ನಾಟಕ ಶಕ್ತಿದೇವಿ ಯಲ್ಲಮ್ಮನ ದೇವಿಗೂ ಮಳೆರಾಯ ಜಲದಿಗ್ಭಂಧನ ಹಾಕಿದ್ದಾನೆ.

ಒಟ್ಟಾರೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಜಲಾವೃತಗೊಂಡ ರಸ್ತೆ ದಾಟಲು ಆಗದೇ ಯಲ್ಲಮ್ಮನ ಗುಡ್ಡದ ಭಕ್ತರು ಪರದಾಡಿದ ದೃಶ್ಯ ಕಂಡು ಬಂದಿದೆ.


Spread the love

LEAVE A REPLY

Please enter your comment!
Please enter your name here