ಬೆಂಗಳೂರಿನಲ್ಲಿ ಮಳೆ ಅಬ್ಬರ: ಸಂಚಾರದಲ್ಲಿ ವ್ಯತ್ಯಯ.. ಪರ್ಯಾಯ ಮಾರ್ಗ ಇಲ್ಲಿದೆ!

0
Spread the love

ಬೆಂಗಳೂರು:- ನಗರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರೀ ಮಳೆಯಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಹಲವು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ ಇದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಪುಟ್ಟೇನಹಳ್ಳಿ ಮುಖ್ಯರಸ್ತೆ ಕಡೆಯಿಂದ ಕೊತ್ತನೂರು ದಿನ್ನೆ ಜಂಕ್ಷನ್ ಕಡೆಗೆ ಹಾಗೂ ಹೊಸಗುಡ್ಡದಹಳ್ಳಿ ಜಂಕ್ಷನ್ ಕಡೆಯಿಂದ ಮೈಸೂರು ರಸ್ತೆ ಟೋಲ್ಗೇಟ್ ಕಡೆಗೆ. ಮಳೆನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿರುವುದರಿಂದ ರೂಪೇನ ಅಗ್ರಹಾರದ ಬಳಿ ರಸ್ತೆ ಜಲಾವೃತಗೊಂಡಿದ್ದು ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸಿ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್​​ನಲ್ಲಿ ನೀರು ತುಂಬಿಕೊಂಡಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ನಗರದಿಂದ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನ ಸವಾರರು ಬದಲಿ ರಸ್ತೆ ಬಳಸುವುದು ಒಳಿತು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೊಸೂರು ಮುಖ್ಯರಸ್ತೆ ಮತ್ತು ಹೊರ ವರ್ತುಲ ರಸ್ತೆ ಜಲಾವೃತಗೊಂಡಿದ್ದು, ಪರ್ಯಾಯ ಮಾರ್ಗಗಳ ಬಳಕೆಗೆ ಪೊಲೀಸರು ಸಲಹೆ ನೀಡಿದ್ದಾರೆ. ಬನಶಂಕರಿ ಕಡೆಯಿಂದ ಬರುವ ವಾಹನಗಳನ್ನು ಈಸ್ಟ್ ಎಂಡ್ ಸರ್ಕಲ್ ಬಳಿ ಎಡ ತಿರುವು ಮಾಡಿಸಿ ಸಾಗರ್ ಜಂಕ್ಷನ್ ಗೆ ಬಂದು ಬಲ ತಿರುವು ಮಾಡಿಸಿ ಬನ್ನೇರಘಟ್ಟ ರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.

ಇನ್ನೂ ಮುಂದೆ ಬಂದ ವಾಹನಗಳನ್ನು ಜಯದೇವ ಜಂಕ್ಷನ್‌ನಲ್ಲಿ ಎಡ ತಿರುವು ಮಾಡಿಸಿ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಬಿ.ಟಿ.ಎಂ ಲೇಔಟ್ ಒಳಭಾಗದಿಂದ ಬರುವ ವಾಹನಗಳನ್ನು 16ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಮಾಡಿಸಿ ತಾವರೆಕೆರೆ ಮುಖ್ಯರಸ್ತೆ ಮೂಲಕ ಡಾ. ಮರಿಗೌಡ ರಸ್ತೆ, ಡೈರಿ ಸರ್ಕಲ್ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಇನ್ನೂ ಬೆಂಗಳೂರು ಮಹಾನಗರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮೆಜೆಸ್ಟಿಕ್, ಕೆ.ಆರ್​.ಮಾರ್ಕೆಟ್, ಜಯನಗರ, ಚಾಮರಾಜಪೇಟೆ, ಬನಶಂಕರಿ, ಶಾಂತಿನಗರ, ವಿಜಯನಗರ, ಚಂದ್ರಾಲೇಔಟ್, ರಾಜಾಜಿನಗರ, ಆರ್.ಟಿ.ನಗರ, ಹೆಬ್ಬಾಳ, ಮಲ್ಲೇಶ್ವರಂ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್ ಸೇರಿ ಹಲವೆಡೆ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಪೈಕಿ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗೆ ಮಳೆ ಜೋರಾಗಿದೆ. ಪರಿಣಾಮವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.


Spread the love

LEAVE A REPLY

Please enter your comment!
Please enter your name here