ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸೋಮವಾರ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಅದರಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾಸನ, ಕೊಡಗು, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶಾಲೆಗಳಿಗೆ ರಜೆ:
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಅಂಗನವಾಡಿ ಮತ್ತು ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ವಸ್ತಾರೆ ಆವತಿ ಹೋಬಳಿ ವ್ಯಾಪ್ತಿಯ ಅಂಗನವಾಡಿ ಮತ್ತು ಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ:
ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.