ಮಂಗಳೂರು:– ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಕಪಿಲಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಮತ್ಸ್ಯಕ್ಷೇತ್ರ ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೆಳ್ತಂಗಡಿಯ ಕಪಿಲಾ ನದಿಯಲ್ಲಿ ಭಾರೀ ನೀರಿನ ಹರಿವು ಹೆಚ್ಚಾಗಿದೆ.
ಬೆಳ್ತಂಗಡಿಯ ಶಿಶಿಲದ ಕಪಿಲಾ ನದಿ ತಟದಲ್ಲಿರುವ ಮತ್ಸ್ಯಕ್ಷೇತ್ರ ಎಂದೇ ಪ್ರಸಿದ್ಧಿಯಾಗಿರುವ ಶಿಶಿಲೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಭಾರೀ ನೀರಿನ ಹರಿವು ಹಿನ್ನೆಲೆ ದೇವಸ್ಥಾನ ಸಂಪರ್ಕದ ಸೇತುವೆ ಮುಳುಗಡೆಯಾಗಿದೆ. ಧುಮ್ಮಿಕ್ಕಿ ಹರಿಯುವ ನದಿಯ ನೀರಿನೊಂದಿಗೆ ಮರದ ದಿಮ್ಮಿಗಳೂ ತೇಲಿ ಬರುತ್ತಿದೆ. ದೇವಸ್ಥಾನದ ಸುತ್ತಲೂ ನೀರು ತುಂಬಿದ್ದು, ಮತ್ತಷ್ಟು ಮಳೆಯಾದರೆ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಭೀತಿ ಎದುರಾಗಿದೆ.