ಬೀದರ್:- ಬೀದರ್ ನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿದ್ದು, ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತುರ್ತು ಕ್ರಮದಿಂದಾಗಿ 40 ನವಜಾತ ಶಿಶುಗಳ ಪ್ರಾಣ ಉಳಿದಿದೆ. ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಶಿಶುಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ ಜೀವ ಉಳಿಸಿದ್ದಾರೆ.
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬ್ರಿಮ್ಸ್ ಕಟ್ಟಡದ ನೆಲಮಾಳಿಗೆಯಲ್ಲಿರುವ ಜನರೇಟರ್ ಕೋಣೆಗೆ ನೀರು ನುಗ್ಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮೂರನೇ ಮಹಡಿಗೆ ಮತ್ತು ಆರನೇ ಮಹಡಿಯಲ್ಲಿನ ಎನ್‌ಐಸಿಯು ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಎಚ್ಚೆತ್ತ ಸಿಬ್ಬಂದಿ ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು. ನರ್ಸಿಂಗ್ ಸಿಬ್ಬಂದಿ ಕೈ ಪಂಪ್ ಮೂಲಕ ಆಮ್ಲಜನಕ ಒದಗಿಸಿ ವೃದ್ಧೆಯೊಬ್ಬರ ಜೀವ ಉಳಿಸಿದ್ದಾರೆ.
ಬ್ರಿಮ್ಸ್ನ ಎನ್‌ಐಸಿಯು ಘಟಕದಲ್ಲಿ 40 ಶಿಶುಗಳಿದ್ದವು. ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ನಂತರ ಎಲ್ಲಾ 40 ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಯಿತು.