ಚೆನ್ನೈ:- ಚೆನ್ನೈನಲ್ಲಿ ಭಾರಿ ಮಳೆ ಹಿನ್ನೆಲೆ, ವಿಮಾನ ಮತ್ತು ರೈಲು ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಆಗಮನ ಮತ್ತು ನಿರ್ಗಮನ ರದ್ದುಗೊಳಿಸಲಾಗಿದೆ. ಇಂಡಿಯೋ ತನ್ನ ಎಲ್ಲಾ ಆಗಮನ ಮತ್ತು ನಿರ್ಗಮನ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಅಬುದಾಬಿಯಿಂದ ಚೆನ್ನೈಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರಿಗೆ ತಿರುಗಿಸಲಾಗಿದೆ.
ಚಂಡಮಾರುತದಿಂದಾಗಿ ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ರಾಜ್ಯಾದ್ಯಂತ 2,229 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಆಶ್ರಯ ಅಗತ್ಯವಿರುವವರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಲಾಗಿದೆ. ಈವರೆಗೆ ತಿರುವಳ್ಳೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ 164 ಕುಟುಂಬಗಳ 471 ಜನರನ್ನು ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದೆ.



