ನವದೆಹಲಿ:- ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ರಾಜ್ಯದ ಹಲವೆಡೆ ರೈಲು ಸಂಚಾರ ವಿಳಂಬ ಆಗಿದೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಪಟ್ಟಣಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ದೇವರನಾಡು ಕೇರಳದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹೀಗಾಗಿ ಕಣ್ಣೂರು, ವಯನಾಡ್, ಕೋಝಿಕ್ಕೋಡ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವರುಣನ ಆರ್ಭಟಕ್ಕೆ ಸಮುದ್ರಗಳು ಪ್ರಕ್ಷುಬ್ದಗೊಂಡಿದೆ. ಭಾರೀ ಮಳೆಯಿಂದಾಗಿ ಜನ ತತ್ತರಿಸಿದ್ದಾರೆ.
ಮಹಾರಾಷ್ಟ್ರದ ಪುಣೆ, ಸತಾರಾ, ಸೋಲಾಪುರ, ರಾಯಗಢ ಮತ್ತು ಮುಂಬೈನಂತಹ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಯಗಢದಲ್ಲಿ ಸಿಡಿಲು ಬಡಿದು ಒಬ್ಬರು ಸಾವನ್ನಪ್ಪಿದ್ದರೆ, ಮುಂಬೈನಲ್ಲಿ ಮರ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಮುಂಬೈ 24 ಗಂಟೆಗಳಲ್ಲಿ 135.4 ಮಿಮೀ ಮಳೆಯಾಗಿದೆ. ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.