ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಸಂಜೆ (ಬುಧವಾರ) ಭಾರೀ ಮಳೆ ಆಗಿದ್ದು, ಕೆಲಸ ಮುಗಿಸಿ ಮನೆಗೆ ಹೊರಟವರಿಗೆ ವರುಣ ಕಾಟ ಕೊಟ್ಟಿದ್ದಾನೆ.
ನಗರದ ಪ್ಯಾಲೇಸ್ ರಸ್ತೆ, ಮೇಖ್ರಿ ಸರ್ಕಲ್, ರಾಜಭವನ, ವಿಧಾನಸೌಧ, ಆನಂದ್ ರಾವ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್, ಲಾಲ್ಬಾಗ್, ಶಾಂತಿನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಹಲವೆಡೆ ಪವರ್ ಕಟ್ ಆಗಿದೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ಕಷ್ಟವಾಗಿದೆ. ರಸ್ತೆ ಗುಂಡಿಗಳು ಕಾಣದೇ ವಾಹನ ಸವಾರರು ಒದ್ದಾಟ ನಡೆಸ್ತಿದ್ದಾರೆ. ಮಳೆಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಆಗಿದೆ.
ಈಗಷ್ಟೇ ಕೆಲಸ ಮುಗಿಸಿ ಬೇಗ ಮನೆಗೆ ಸೇರಬೇಕು ಅಂದುಕೊಂಡು ಹೊರಟಿದ್ದವರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಭಾರೀ ಮಳೆಯಿಂದಾಗಿ ಬೆಂಗಳೂರು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 6 ವರೆಗೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.