ಬೆಂಗಳೂರು: ರಾಜ್ಯಕ್ಕೆ ಅವಧಿ ಪೂರ್ವಕ್ಕೂ ಮೊದಲೇ ಎಂಟ್ರಿ ಕೊಟ್ಟಿರೋ ಮುಂಗಾರು ತನ್ನ ಆಟ ಶುರು ಮಾಡಿದೆ. ಆರಂಭದಲ್ಲೇ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣ ಅವಾಂತರ ಸೃಷ್ಟಿಸ್ತಾ ಜನರನ್ನ ಹೈರಾಣಾಗಿಸಿದ್ದಾನೆ.
ಇದೀಗ ಕರ್ನಾಟಕದಾದ್ಯಂತ ಜೂನ್ 2ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು,
ಸಾಧಾರಣ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್ ಘೋಷಿಸಲಾಗಿದೆ.
ಭಾಗಮಂಡಲ, ನಾಪೋಕ್ಲು, ಮುಲ್ಕಿ, ಸುಳ್ಯ, ಧರ್ಮಸ್ಥಳ, ಮಂಗಳೂರು, ಗೇರುಸೊಪ್ಪ, ಉಪ್ಪಿನಂಗಡಿ, ಆಗುಂಬೆ, ಸೋಮವಾರಪೇಟೆಯಲ್ಲಿ ಭಾರಿ ಮಳೆಯಾಗಿದೆ. ಮಾಣಿ, ನಿಪ್ಪಾಣಿ, ಕಾರ್ಕಳ, ಪಣಂಬೂರು, ಕದ್ರಾ, ಹೊನ್ನಾವರ, ಅಣ್ಣಿಗೆರೆ, ಪೊನ್ನಂಪೇಟೆ, ಕಳಸ, ಕುಶಾಲನಗರ, ಬಂಡೀಪುರ, ಜಯಪುರ, ಶೃಂಗೇರಿ, ಹಾರಂಗಿ, ಕೊಪ್ಪ, ನರಗುಂದ, ಕಾರವಾರ, ಚಿಕ್ಕೋಡಿ, ದೇವರಹಿಪ್ಪರಗಿ, ಎಚ್ಡಿ ಕೋಟೆ, ಹುಣಸೂರು, ಅರಕಲಗೂಡು, ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ.