ಲಕ್ನೋ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಕೌಶಂಬಿ ಜಿಲ್ಲೆಯತ್ತ ಪ್ರಯಾಣಿಸುತ್ತಿದ್ದರು. ಲಕ್ನೋದಲ್ಲಿರುವ ಲಾ ಮಾರ್ಟಿನಿಯರ್ ಕಾಲೇಜು ಮೈದಾನದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಕಾಣಿಸಿಕೊಂಡಿದೆ.
ಇದರಿಂದಾಗಿ ಪೈಲಟ್ ತಕ್ಷಣವೇ ಹೆಲಿಕಾಪ್ಟರ್ ಅನ್ನು ಲಕ್ನೋದಲ್ಲೇ ತುರ್ತು ಲ್ಯಾಂಡಿಂಗ್ ಮಾಡಿಸಿದ್ದಾರೆ.
ಕೌಶಂಬಿಯಲ್ಲಿ ನಡೆಯಲಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಡಿಸಿಎಂ ತೆರಳುತ್ತಿದ್ದರು. ಈ ವೇಳೆ ಅವರೊಂದಿಗೆ ಸಹಾಯಕ ವಿವೇಕ್ ಹಾಗೂ ಇಬ್ಬರು ಪೈಲಟ್‌ಗಳು ಸೇರಿ ಒಟ್ಟು ಐದು ಮಂದಿ ಹೆಲಿಕಾಪ್ಟರ್‌ನಲ್ಲಿ ಇದ್ದರು ಎಂದು ತಿಳಿದುಬಂದಿದೆ.
ಘಟನೆ ಬಳಿಕ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸುರಕ್ಷಿತರಾಗಿದ್ದು, ನಂತರ ಮತ್ತೊಂದು ಹೆಲಿಕಾಪ್ಟರ್ ಮೂಲಕ ಕೌಶಂಬಿಗೆ ಪ್ರಯಾಣ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್‌ನಲ್ಲಿ ಹೊಗೆ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ.



