ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ ನೇತೃತ್ವದ ನಿಯೋಗವು ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ವಿಭಾಗದ ಅಧಿಕಾರಿ ಉಮೇಶ್ ದಂಟಿ ಅವರನ್ನು ಸೋಮವಾರ ಭೇಟಿ ಮಾಡಿ, ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಸಹಕಾರ ನೀಡಲು ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಕ್ರಿಯಿಸಿ, ವ್ಯಾಪಾರಸ್ಥರು ಜಿಎಸ್‌ಟಿ ಕಾಯ್ದೆಯ ವ್ಯಾಪ್ತಿಯಲ್ಲಿ ಇರುವಾಗ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕಾಯ್ದೆಯ ಅಧೀನದಲ್ಲಿಲ್ಲದ ವಹಿವಾಟುಗಳು ಕಂಡುಬಂದಲ್ಲಿ, ನಿರ್ದಿಷ್ಟವಾಗಿ ಜಾರಿ ಇರುವ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ವ್ಯಾಪಾರಸ್ಥರೂ ಸಹ ತಮ್ಮ ವಹಿವಾಟುಗಳನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆಸಬೇಕೆಂದು ಸಲಹೆ ನೀಡಿದರು.
ನಿಯೋಗದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಜಯಕುಮಾರ ಎಸ್.ಮಾಟಲದಿನ್ನಿ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್.ಕಾಲವಾಡ, ಕೋಶಾಧಿಕಾರಿ ಸಂಜಯ ಬಾಗಮಾರ ಉಪಸ್ಥಿತರಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.