ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆ ಒಂದು ಶೈಕ್ಷಣಿಕ ಪರಿವಾರ. ಈ ಪರಿವಾರದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಪ್ರತಿ ವಿದ್ಯಾರ್ಥಿಯ ಮೇಲೆ ಸಮಪ್ರಮಾಣದ ಜವಾಬ್ದಾರಿ, ಹಕ್ಕನ್ನು ಹೊಂದಿರುತ್ತಾರೆ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಹಕಾರ ನೀಡುವಲ್ಲಿ ಗಮನಹರಿಸಬೇಕು ಎಂದು ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಡುವಿನಮನಿ ಹೇಳಿದರು.
ಗದಗ ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಪೂರ್ವ ಪ್ರಾರ್ಥಮಿಕ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸುದೈವ ಎನ್ನುವಂತೆ ಮೊದಲ ಪ್ರಯತ್ನದಲ್ಲೇ ಪೂರ್ವ ಪ್ರಾಥಮಿಕ ಶಾಲೆಗೆ ಅನುಮತಿ ದೊರೆತು, ಇಂದು ಉದ್ಘಾಟನೆಗೊಂಡಿದೆ. ಇದರಿಂದ ಚಿಕ್ಕಮಕ್ಕಳನ್ನು ಪಾಲಕರು ಪರ ಊರಿಗೆ ಕರೆದೊಯ್ಯವದು ತಪ್ಪಿದಂತಾಗಿದ್ದು, ಇದರಿಂದ ಪಾಲಕರಿಗೂ ಸಾಕಷ್ಟು ಅನುಕೂಲವಾಗಿದೆ. ಸರ್ಕಾರಿ ಶಾಲೆಗಳು ಇಂದು ನಿಸ್ವಾರ್ಥದಿಂದ, ಪಾರದರ್ಶಕವಾಗಿ, ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಿವೆ ಎಂದರೆ ಅದಕ್ಕೆ ಗ್ರಾಮಸ್ಥರ ಹಾಗೂ ನಾಗೇಶ ಹುಬ್ಬಳ್ಳಿಯವರಂಥ ದಾನಿಗಳ ಕೊಡುಗೆ ಅಪಾರವಾದದ್ದು. ಹೀಗಾಗಿ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರು ಶಾಲೆಯಲ್ಲಿ ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರೇರಕ ಶಕ್ತಿಯಾಗುವಲ್ಲಿ ಪ್ರಯತ್ನಿಸಬೇಕು ಎಂದರು.
ನೀರಾವರಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಫ್‌ಎಸ್. ಗುರಿಕಾರ ಮಾತನಾಡಿದರು. ಇದೇ ವೇಳೆ, ಶಾಲಾ ಆವರಣದಲ್ಲಿ ಪ್ರಾರಂಭವಾದ ನೂತನ ಪೂರ್ವ ಪ್ರಾಥಮಿಕ ಶಾಲೆಯನ್ನ ನಾಗೇಶ ಹುಬ್ಬಳ್ಳಿ, ಬಿ.ವಿ. ನಡುವಿನಮನಿ, ಎಸ್‌ಡಿಎಂಸಿ ಸದಸ್ಯರು, ಗ್ರಾ.ಪಂ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ದೇಣಿಗೆ ನೀಡಿದ ನಾಗೇಶ ಹುಬ್ಬಳ್ಳಿ, ಶಾಲೆಗೆ ಭೂದಾನ ಮಾಡಿದ ರೇಣುಕಾ ಹಂಚಿನಾಳ, ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಿದ ಎಫ್.ಎಸ್. ಗುರಿಕಾರ ಹಾಗೂ ಇನ್ನಿತರ ಸಹಕಾರ ನಿಡಿದ ಪ್ರಭಯ್ಯ ದೇಸಾಯಿಮಠ, ಬಸವರಾಜ ಗುಳಣವರ ಅವರನ್ನ ಶಾಲಾ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಿಆರ್‌ಪಿ ಎಸ್.ಜಿ. ಚವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಂ.ಜಿ. ಮಳ್ಳೂರ ಸ್ವಾಗತಿಸಿದರೆ, ಎಸ್.ಬಿ. ಭಜಂತ್ರಿ ನಿರೂಪಿಸಿದರು. ವಿಶ್ವನಾಥ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಯಲ್ಲಪ್ಪ ಕಲ್ಯಾಣಿ, ಮಾಜಿ ಅಧ್ಯಕ್ಷ ಎಸ್.ಎಚ್. ತಳವಾರ, ಗ್ರಾ.ಪಂ ಸದಸ್ಯರಾದ ಶಿವಯ್ಯ ಮನಗೇಣಿ, ಮುತ್ತಪ್ಪ ಮುಳಗುಂದ, ಪಾರ್ವತವ್ವ ಕಲ್ಯಾಣಿ, ಕಾಂಗ್ರೆಸ್ ಮುಖಂಡ ಅಜ್ಜಪ್ಪ ಹುಗ್ಗೆಣ್ಣವರ, ಗ್ರಾಮದ ಹಿರಿಯರಾದ, ಬಸಪ್ಪ ಸೋಗಿ, ಚಂದ್ರಪ್ಪ ಹೊಂಬಣ್ಣವರ, ಶಿಕ್ಷಕರಾದ ರವಿ ಪೂಜಾರ, ಕವಿತಾ ತಳವಾರ, ಲಾವಣ್ಯ ದೇಸಾಯಿ ಇನ್ನಿತರರು ಪಾಲ್ಗೊಂಡಿದ್ದರು.
ದಾನಿಗಳಾದ ಮುಂಡರಗಿ ಪುರಸಭೆ ಉಪಾಧ್ಯಕ್ಷರಾದ ನಾಗೇಶ ಹುಬ್ಬಳ್ಳಿ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಅಂದರೆ, ಅವುಗಳಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ. ಎಲ್ಲವನ್ನೂ ಸರ್ಕಾರವೇ ನಿಭಾಯಿಸಬೇಕು ಅಂದರೆ ಅಸಾಧ್ಯ. ಅದಕ್ಕೆ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರ ಅತ್ಯಗತ್ಯ. ಹೊಸೂರು ಶಾಲೆಗೆ ಸ್ಮಾರ್ಟ್ ಟಿವಿ ಅವಶ್ಯಕತೆಯಿದೆ ಎಂದು ತಿಳಿದಾಗ, ತಕ್ಷಣ ಅದರ ವೆಚ್ಚವನ್ನು ಪೂರೈಸುವುದಾಗಿ ವಾಗ್ದಾನ ಮಾಡಿದ್ದೆ. ಆ ಪ್ರಕಾರ ಇಂದು 50 ಸಾವಿರ ರೂ.ಗಳನ್ನು ಶಾಲಾ ಆಡಳಿತ ಮಂಡಳಿಗೆ ನೀಡಿರುವುದು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಂತೃಪ್ತಿ ನನ್ನದಾಗಿದೆ ಎಂದರು.



