ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವಿವಿಧ ಬಡಾವಣೆಯಲ್ಲಿ ಅಂಬಿಗ, ಸುಣಗಾರ ಸಮಾಜದ ನೂರಾರು ಬಡ ಕುಟುಂಬದವರು ಬಹಳ ವರ್ಷ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಗೂಲಿ ಮಾಡಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮೂಲ ವೃತ್ತಿಯಾದ ಸುಣ್ಣದ ವ್ಯಾಪಾರ ಕಮ್ಮಿಯಾಗಿದ್ದು, ಜೀವನ ಸಾಗಿಸುವುದು ಕಷ್ಟವಾಗಿದೆ.
ಹೀಗಾಗಿ, ಸರ್ಕಾರದಿಂದ ಮನೆ ಇಲ್ಲದ ಬಡ ಕುಟುಂಬಗಳಿಗೆ ಮನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಲ್ಲಿ ಅಂಬಿಗರ ಸಮಾಜ ಟ್ರಸ್ಟ್ ಪ್ರಧಾನ ಕಾರ್ಯದಶಿ ಸಂಗಮೇಶ ಹಾದಿಮನಿ ಮನವಿ ಮಾಡಿದ್ದಾರೆ.
ಮಕ್ಕಳು ವಿದ್ಯಾಭ್ಯಾಸ ಬಿಟ್ಟು ಮನೆಯ ನಿರ್ವಹಣೆಗೆ ಕೆಲಸಕ್ಕೆ ಹೋಗಿ ಬಾಡಿಗೆ ಕಟ್ಟಿ ಜೀವನದ ಹೊಸ ಆಸೆಗಳೇ ಬತ್ತಿ ಹೋಗಿವೆ. ಬಹಳ ವರ್ಷದಿಂದ ಯುವಕರು ಕುಟುಂಬ ಬಿಟ್ಟು ದುಡಿಯಲು ದೂರದ ಊರುಗಳಿಗೆ ಗುಳೇ ಹೋಗುತ್ತಿದ್ದು, ಮೂಲ ವೃತ್ತಿಯಾದ ಮೀನುಗಾರಿಕೆ, ದೋಣಿ ನಡೆಸುವುದು, ಸುಣ್ಣದ ವ್ಯಾಪಾರ ಕಣ್ಮರೆ ಆಗಿರುವುದು ವಿಷಾದನೀಯ. ಮೂಲ ವೃತ್ತಿ ಅಭಿವೃದ್ಧಿಪಡಿಸಲು ಸಹಾಯಹಸ್ತ ನೀಡಿ ಸುಣಗಾರ, ಅಂಬಿಗ ಸಮಾಜದ ಜನರ ಬದುಕಿಗೆ ಆಸರೆ ಆಗಬೇಕೆಂದು ಅವರು ವಿನಂತಿಸಿದ್ದಾರೆ.