ವಿಜಯಸಾಕ್ಷಿ ಸುದ್ದಿ, ಗದಗ : ಮಾ.25ರಿಂದ ಮಾ.29ರವರೆಗೆ ಹೋಳಿ ಹಬ್ಬದ ಪ್ರಯುಕ್ತ ಶಹರದಲ್ಲಿ ಸುಮಾರು 25 ಸ್ಥಳಗಳಲ್ಲಿ ಕಾಮ ರತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದು, ಹೋಳಿ ಹಬ್ಬದ ಆಚರಣೆ ಕಾಲಕ್ಕೆ ಎಲ್ಲ ಕಾಮ-ರತಿ ಮೂರ್ತಿ ಪ್ರತಿಷ್ಠಾಪನೆ ಮಂಡಳಿಯವರು ಚುನಾವಣೆ ಅಧಿಕಾರಿಗಳು/ನಗರಸಭೆ/ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು. ಎಲ್ಲರೂ ಕಾಮ-ರತಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಗದಗ ಶಹರ ಪೊಲೀಸ್ ಠಾಣೆಯ ಪಿಐ ಡಿ.ಬಿ ಪಾಟೀಲ್ ಹೇಳಿದರು.
ಶಹರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಮೆರವಣಿಗೆ ಕಾಲಕ್ಕೆ ದುರ್ನಡತೆ ತೋರುವವರು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು. ಹಬ್ಬ ಶಾಂತ ರೀತಿಯಿಂದ ಜರುಗಲು ಇಲಾಖಾ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ರಂಗಪಂಚಮಿ ದಿನದಂದು ಮೆರವಣಿಗೆಯನ್ನು ಬೇಗ ಮುಕ್ತಾಯ ಮಾಡಬೇಕು. ಮೆರವಣಿಗೆ ಮಾರ್ಗದಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಬೇಕು. ಅಲ್ಲದೇ ಮೆರವಣಿಗೆಯು ಮಂದಿರ/ಚರ್ಚ್/ಮಸೀದಿಗಳ ಮುಂದೆ ಹಾಯ್ದು ಹೋಗುವಾಗ ಅನ್ಯ ಕೋಮಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಘೋಷಣೆ ಹಾಗೂ ಹಾಡುಗಳನ್ನು ಹಾಡಬಾರದು. ಹಬ್ಬ ಆಚರಣೆ ಕಾಲಕ್ಕೆ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಕೆ. ಪಾಟೀಲ್, ನಗರ ಸಭೆಯ ಎ.ಇ.ಇ ಆನಂದ ಬದಿ, ಅಬಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟ್ರ್ ಆಶಾರಾಣಿ ಗುಡದಾರ, ಠಾಣೆಯ ಸಿಬ್ಬಂದಿಗಳು, ವಿ.ಎಸ್. ಭಿಕ್ಷಾವತಿಮಠ, ಎನ್.ಜಿ. ಭರಮಗೌಡರ, ಎ.ಆರ್. ಕವಲೂರ ಹಾಜರಿದ್ದರು. ಮುಖಂಡರಾದ ರಾಮಣ್ಣ ಫಲದೊಡ್ಡಿ, ಎಸ್.ಎನ್. ಬಳ್ಳಾರಿ, ಅಕ್ಬರಸಾಬ ಬಬರ್ಚಿ, ಅಜ್ಜಣ್ಣ ಮಲ್ಲಾಡದ್, ಫಕ್ಕಿರಪ್ಪ ಹೇಬಸೂರ, ಸುಧೀರ ಕಾಟಗೇರ, ವಿಜಯ ಕಲ್ಮನಿ, ರಾಘವೇಂದ್ರ ಪರಾಪೂರ, ಗಣೇಶ ಹುಬ್ಬಳ್ಳಿ, ಬಸಣ್ಣ ಪಡಗದ, ಹುಡಚಪ್ಪ ಹಳ್ಳಿಕೆರಿ, ಅಪ್ಪುರಾಜ ಹಾಗೂ ಕಾಮ ರತಿ-ಪ್ರತಿಷ್ಪಾನೆ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಹನುಮಂತ ಯಡಿಯಾಪೂರ ವಂದಿಸಿದರು.
ಕಾಮ-ರತಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ದಿನದ 24*7 ಗಂಟೆ ಕಾಲ ಸ್ವಯಂ ಸೇವಕರು ಇರಬೇಕು. ರಸ್ತೆ ಮೇಲೆ ನಿಂತು ಸಾರ್ವಜನಿಕರಿಂದ ಹಣ ವಸೂಲಿ ಮಾಡಬಾರದು. ಮತ್ತು ರಸ್ತೆ ಮೇಲೆ ಕಾಮ ರತಿ ಮೂರ್ತಿ ದಹನ ಮಾಡಬಾರದು, ಒತ್ತಾಯ ಪೂರ್ವಕವಾಗಿ ಯಾರಿಗೂ ಕೂಡಾ ಬಣ್ಣ ಎರಚಬಾರದು. ಹಬ್ಬದ ಆಚರಣೆ ಕಾಲಕ್ಕೆ ಬೈಕನಲ್ಲಿಯ ಪೆಟ್ರೊಲ್/ಬೆಲೆ ಬಾಳುವ ಕಟ್ಟಿಗೆ ಸಾಮಾನುಗಳನ್ನು/ಇತರೆ ವಸ್ತುಗಳನ್ನು ಹಬ್ಬದ ನೆಪದಲ್ಲಿ ಕಳವು ಮಾಡಬಾರದು. ಸದರ ಹಬ್ಬವನ್ನು ಹಿಂದೂ-ಮುಸ್ಲಿಂ ಜನರು ಕೂಡಿಕೊಂಡು ಶಾಂತ ರೀತಿಯಿಂದ ಆಚರಣೆ ಮಾಡಬೇಕು. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಇರುವುದರಿಂದ ಹಲಗೆಯನ್ನು ರಾತ್ರಿ 10 ಗಂಟೆಯ ನಂತರ ಬಾರಿಸಬಾರದು ಎಂದು ಡಿ.ಬಿ ಪಾಟೀಲ್ ಸೂಚಿಸಿದರು.


