HomeKarnataka Newsಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ - ಡಿ.ಕೆ. ಶಿವಕುಮಾರ್

ಹೇಮಾವತಿ ಲಿಂಕ್ ಕೆನಾಲ್ ಯೋಜನೆ: ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ – ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ತುಮಕೂರು:“ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ ನಂತರ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

“ಈ ವಿಚಾರದಲ್ಲಿ ಯಾವುದೇ ರೈತರು ಗಾಬರಿಯಾಗುವುದು ಬೇಡ. ನಾನು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಕೇವಲ ಕುಣಿಗಲ್ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳ ಹಿತ ನಮಗೆ ಮುಖ್ಯ. ನಾವೆಲ್ಲರೂ ಸೇರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ನಿಮ್ಮ ಸಮಸ್ಯೆ ಏನೇ ಇದ್ದರೂ ನಾನು ಅದನ್ನು ಬಗೆಹರಿಸುತ್ತೇನೆ” ಎಂದು ಧೈರ್ಯ ತುಂಬಿದರು.

“ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಶಾಸಕರ ಸಲಹೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾದವನಲ್ಲ. ಕರ್ನಾಟಕ ರಾಜ್ಯದ ನೀರಾವರಿ ಮಂತ್ರಿಯಾಗಿದ್ದೇನೆ. ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ನಮ್ಮ ಜವಾಬ್ದಾರಿ. ತುಮಕೂರಿನ ಜನರು ಪ್ರತಿ ಸಂದರ್ಭದಲ್ಲಿಯೂ ನಮಗೆ ಸಂಯಮದಿಂದ ಸಹಕಾರ ನೀಡಿದ್ದಾರೆ” ಎಂದರು.

“ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ನಾನು ನೀರಾವರಿ ಸಚಿವನಾಗಿದ್ದ ವೇಳೆ ಈ ಯೋಜನೆ ಪ್ರಾರಂಭಿಸಲಾಯಿತು. ನಂತರ ಬಿಜೆಪಿ ಸರ್ಕಾರ ಈ ಯೋಜನೆ ನಿಲ್ಲಿಸಿತ್ತು. ಪರಿಣಾಮ 600 ಕೋಟಿಯಿದ್ದ ಯೋಜನಾ ವೆಚ್ಚ ಇಂದು ಒಂದು ಸಾವಿರ ಕೋಟಿಗೆ ಏರಿಕೆಯಾಗಿದೆ. ವೈ.ಕೆ ರಾಮಯ್ಯ ಅವರ ಕಾಲದಿಂದ ಈ ಹೋರಾಟ ನಡೆದಿದ್ದು, ಇದಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಪೈಪ್ ಗಳ ಖರೀದಿ ಹಾಗೂ ಕೆಲಸ ಆರಂಭಿಸಿ 400 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಇದು ನಾಲ್ಕೈದು ತಿಂಗಳಲ್ಲಿ ಮುಗಿಯುವ ಕೆಲಸ” ಎಂದು ಹೇಳಿದರು.

“ಕಾವೇರಿಯಿಂದ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು. ಈ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್ ಎಸ್ ಜಲಾಶಯದಿಂದ ಈ ವರ್ಷ ಈಗಾಗಲೇ 220 ಟಿಎಂಸಿ ನೀರು ಹೋಗಿದೆ. ಇನ್ನು ನಾಲ್ಕೈದು ತಿಂಗಳು ಮಳೆ ಬರುವ ಸಾಧ್ಯತೆ ಇದೆ. ಸುಮಾರು 200 ಟಿಎಂಸಿ ನೀರು ಸಮುದ್ರ ಸೇರುವ ನಿರೀಕ್ಷೆ ಇದೆ. ಇದನ್ನು ತಡೆದು ನಮ್ಮ ರೈತರಿಗೆ ಸಹಾಯ ಮಾಡಬೇಕು. ಇದಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಸಬೇಕು. ನೀರು ಹೆಚ್ಚಾಗಿದ್ದಾಗ ಮಾತ್ರ ಬಳಸಲು ಈ ಯೋಜನೆ ತಂದಿದ್ದೇವೆ, ನಮಗೆ ಎಲ್ಲಾ ತಾಲೂಕುಗಳು ಒಂದೇ” ಎಂದು ತಿಳಿಸಿದರು.

“ನಾನು ಕಾಮಗಾರಿ ಸ್ಥಳವನ್ನು ಪರಿಶೀಲನೆ ಮಾಡಿದೆ. ಯಾವುದೇ ಕಾರಣಕ್ಕೂ ನೀರನ್ನು ಕಾಲುವೆಗಳಿಗಿಂತ ಕೆಳಗೆ ಸಾಗಿಸುವುದಿಲ್ಲ. ಒಂದೇ ಎತ್ತರ ಕಾಯ್ದುಕೊಂಡು ಸ್ಕಾಡಾ ಹಾಕಿ ನೀರಿನ ಹರಿವು ಪರಿಶೀಲನೆ ಮಾಡಬಹುದು. ನಾವು ತಮಿಳುನಾಡು, ಮಹಾರಾಷ್ಟ್ರ ಜೊತೆಗಿನ ಜಲ ವಿವಾದದಂತೆ ನಮ್ಮೊಳಗೆ ವಿವಾದಗಳಾಗಬಾರದು. ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸಿದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಅವರಂತೆ ನಮ್ಮ ಸ್ಥಳೀಯರು ಅಡ್ಡಿಪಡಿಸಬಾರದು. ನಾನು ಎಲ್ಲಾ ಶಾಸಕರಿಗೆ ಈ ವಿಚಾರವಾಗಿ ಹೇಳಿದ್ದೇನೆ. ತುಮಕೂರಿನ ಎಲ್ಲಾ ಕ್ಷೇತ್ರಗಳ ಹಿತ ಕಾಯ್ದು, ಗೌರವ ನೀಡಲು ನಾವು ಬದ್ಧ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ. ಕಳೆದ 20 ವರ್ಷಗಳಿಂದ ಈ ಯೋಜನೆಯ ಕೊನೆ ಭಾಗದ ರೈತರಿಗೆ ಸರಿಯಾಗಿ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಯೋಜನೆ ತಂದಿದ್ದೇವೆ” ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!