ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲಿನ ವಿದ್ಯುತ್ ಕಂಬವು ಮಂಗಳವಾರ ಬೆಳಿಗ್ಗೆ ಧರಾಶಾಹಿಯಾಗಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬರಿಗೆ ಗಾಯವಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಪಟ್ಟಣ ಪಂಚಾಯಿತಿ ವತಿಯಿಂದ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲಿ ಚರಂಡಿ ಕಾಮಗಾರಿ ನಡೆದಿದ್ದು, ಚರಂಡಿಗೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದೆ. ವಿದ್ಯುತ್ ಕಂಬವು ಬಾಗಿ, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿತ್ತು. ಅದನ್ನು ಬದಲಿಸುವಂತೆ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು.
ವಿದ್ಯುತ್ ಕಂಬದ ಬುಡದಲ್ಲಿಯೇ ಚರಂಡಿ ನಿರ್ಮಾಣ ಮಾಡಿದ ಪರಿಣಾಮ ವಿದ್ಯುತ್ ಕಂಬ ಸ್ಥಳೀಯ ನಿವಾಸಿ ಅನಿಲ ಹೊಸಳ್ಳಿ ಅವರ ಮೇಲೆಯೇ ಬಿದ್ದಿದ್ದು, ಅವರ ಮೊಣಕಾಲು, ಬೆನ್ನಿಗೆ ಗಾಯಗಳಾಗಿವೆ. ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ಅಪಾಯವಾಗಿಲ್ಲ. ಇಲ್ಲದಿದ್ದರೆ, ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಸ್ಕಾಂ ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಚರಂಡಿ ನಿರ್ಮಾಣಕ್ಕೂ ಮುಂಚೆ ವಿದ್ಯುತ್ ಕಂಬವನ್ನು ಸ್ಥಳಾಂತರಿಸಬೇಕಿತ್ತು. ಅದನ್ನು, ಬಿಟ್ಟು ಕಂಬದ ಬುಡದಲ್ಲಿ ಚರಂಡಿ ನಿರ್ಮಾಣ ಮಾಡಿದ ಫಲವಾಗಿ ಕಂಬದ ಬುಡ ಸಡಿಲಗೊಂಡಿದೆ. ಇದರ ಪರಿಣಾಮ ಕಂಬ ಬಿದ್ದಿದೆ. ಕಂಬವನ್ನು ಸ್ವಯಂ ಕಾರ್ಯದಡಿ ಪ.ಪಂ ಸ್ಥಳಾಂತರ ಮಾಡಬೇಕಿತ್ತು ಎಂದು ಹೆಸ್ಕಾಂ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಪ.ಪಂ ಮತ್ತು ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಜೀವ ತೆರಬೇಕಾಗಿರುವುದು ಖಂಡನೀಯ.
– ಶಿವಪುತ್ರಪ್ಪ ಸಂಗನಾಳ.
ನಿವೃತ್ತ ಸೈನಿಕ.
ನಾನು ಬೆಳಗ್ಗೆ ಶೌಚಕ್ಕೆಂದು ಹೋಗುತ್ತಿದ್ದಾಗ ಏಕಾಏಕಿ ವಿದ್ಯುತ್ ಕಂಬ, ತಂತಿ ಬಿದ್ದ ಪರಿಣಾಮ ಮೊಣಕಾಲಿಗೆ, ಬೆನ್ನಿಗೆ ಗಾಯಗಳಾಗಿವೆ. ಚರಂಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಧಕ್ಕೆ ಆಗುತ್ತದೆ ಎಂಬ ಅರಿವಿದ್ದರೂ ಚರಂಡಿ ನಿರ್ಮಾಣ ಮಾಡಿರುವುದು ಅವಘಡಕ್ಕೆ ಕಾರಣವಾಗಿದೆ.
-ಅನಿಲ ಹೊಸಳ್ಳಿ.
ಗಾಯಗೊಂಡವರು.
ಸೋಮವಾರ ಸಂಜೆ ಚರಂಡಿ ಕಾಮಗಾರಿಯ ಹತ್ತಿರದ ವಿದ್ಯುತ್ ಕಂಬ ಬಾಗಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ, ಕಂಬವನ್ನು ಸ್ಥಳಾಂತರಿಸಲು ಪ.ಪಂ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅವರು ಒಪ್ಪಿಗೆಯನ್ನೂ ಸೂಚಿಸಿದ್ದರು. ಮಂಗಳವಾರ ಕಂಬವನ್ನು ಸ್ಥಳಾಂತರ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ಕಂಬ ಬಿದ್ದಿದೆ. ತಕ್ಷಣವೇ ಕಂಬವನ್ನು ಸ್ಥಳಾಂತರ ಮಾಡಲಾಗುತ್ತದೆ.
– ವಿರೂಪಾಕ್ಷ ಸರ್ವಿ.
ಪ್ರಭಾರಿ ಶಾಖಾಧಿಕಾರಿ, ಹೆಸ್ಕಾಂ ನರೇಗಲ್ಲ.