ಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ಅರ್ಜಿಯನ್ನು, ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದನ್ನು ಗಮನಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ನ್ಯಾಯಪೀಠ, ಬಿಎಂಐಸಿ ಯೋಜನೆಯಡಿ ಫೆರಿಫೆರಲ್ ರಸ್ತೆಗಳು ಹಾಗೂ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಭಾರಿ ಪ್ರಮಾಣದ ಸುಂಕ ಸಂಗ್ರಹಿಸಲಾಗುತ್ತಿದೆ. ಆದರೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ಮೂಲಸೌಕರ್ಯ ಕಾರಿಡಾರ್ ಯೋಜನೆ ಕೇವಲ ಕಾಗದಗಳಲ್ಲೇ ಉಳಿದಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಯೋಜನಾ ನಿರ್ಮಾಣಕಾರರು ದೊಡ್ಡ ಪ್ರಮಾಣದ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರೂ, ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಭವಿಷ್ಯದಲ್ಲಿಯೂ ಅದನ್ನು ಪೂರ್ಣಗೊಳಿಸುವ ಯಾವುದೇ ಸ್ಪಷ್ಟ ಸೂಚನೆ ಇಲ್ಲ. ಭೂಮಿ ಸಮರ್ಪಕವಾಗಿ ಬಳಸಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಯೋಜನೆಯನ್ನು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
ನಗರದ ಜನದಟ್ಟಣೆ ಕಡಿಮೆ ಮಾಡುವುದು, ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ವ್ಯಾಪಾರ ಹಾಗೂ ವೃತ್ತಿಪರರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಎಂಐಸಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈ ಉದ್ದೇಶಗಳು ಈಡೇರದೇ ದೂರದ ಕನಸಾಗಿಯೇ ಉಳಿದಿವೆ ಎಂದು ಪೀಠ ತಿಳಿಸಿದೆ. ಟೋಲ್ ಪ್ಲಾಜಾ ಮತ್ತು ಫೆರಿಫೆರಲ್ ರಸ್ತೆಗಳ ಹೊರತು, ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್ ಎಕ್ಸ್‌ಪ್ರೆಸ್‌ವೇ ಮಾತ್ರ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
ಪಿಟಿಆರ್ ಅಡಿಯಲ್ಲಿ ಕಲ್ಪಿಸಲಾದ ನಗರ ದಟ್ಟಣೆ ಕಡಿಮೆ ಮಾಡುವ ಭವಿಷ್ಯಮುಖಿ ಪರಿಕಲ್ಪನೆ ವಿಫಲವಾಗಿದೆ. ಒಪ್ಪಂದವೂ ಯಶಸ್ವಿಯಾಗಿಲ್ಲ. ಇಂತಹ ಸ್ಥಿತಿಯಲ್ಲಿ ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದ ಪೀಠ, ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಹಳೆಯ ಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದರೆ ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ರೂಪಿಸುವುದೇ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.
ಇಂದಿನ ಬೆಂಗಳೂರು ನಗರದ ಜನಸಂಖ್ಯೆ 1.40 ಕೋಟಿಗೂ ಅಧಿಕವಾಗಿದೆ. ದಿನನಿತ್ಯದ ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕುಸಿತ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿದರೆ, ರಾಜ್ಯ ಸರ್ಕಾರವು ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಮತ್ತು ಪರಿಣಾಮಕಾರಿ ಯೋಜನೆಗಳ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.



