‘ಅಖಂಡ 2’ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದಿದೆ ಎಂದುಕೊಂಡ ಕ್ಷಣದಲ್ಲೇ ಮತ್ತೆ ದೊಡ್ಡ ಶಾಕ್ ಎದುರಾಗಿದೆ! ಬಾಲಕೃಷ್ಣ ಅಭಿನಯಿಸಿದ ಈ ಮಸ್ಸಿವ್ ಸೀಕ್ವೆಲ್ ಡಿಸೆಂಬರ್ 5ರಂದು ಬಿಡುಗಡೆಯಾಗಬೇಕಿತ್ತು. ಆದರೆ ಹಳೆಯ ಕೇಸ್ ಒಂದರ ಪರಿಣಾಮ ಮದ್ರಾಸ್ ಹೈಕೋರ್ಟ್ ಬಿಡುಗಡೆಗೆ ಬ್ರೇಕ್ ಹಾಕಿತ್ತು. ವಿವಾದ ಬಗೆಹರಿದ ನಂತರ, ತಂಡ ಡಿಸೆಂಬರ್ 12ರಂದು ಅಂದರೆ ಇಂದು ಚಿತ್ರವನ್ನು ಬಿಡುಗಡೆ ಮಾಡಲು ಪೂರ್ಣ ಸಿದ್ಧತೆ ಮಾಡಿಕೊಂಡಿತ್ತು.
ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳಿಂದ ಟಿಕೆಟ್ ದರ ಹೆಚ್ಚಳಕ್ಕೂ, ವಿಶೇಷ ಪ್ರೀಮಿಯರ್ ಶೋಗಳಿಗೂ ಗ್ರೀನ್ ಸಿಗ್ನಲ್ ಬಂದಿದ್ದರಿಂದ ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತೆಲಂಗಾಣ ಸರ್ಕಾರ ಸಿಂಗಲ್ ಸ್ಕ್ರೀನ್‌ಗಳಿಗೆ ₹50, ಮಲ್ಟಿಪ್ಲೆಕ್ಸ್‌ಗಳಿಗೆ ₹100 ಹೆಚ್ಚುವರಿ ದರ ಅನುಮತಿಸಿದರೂ, ಪ್ರೀಮಿಯರ್ ಶೋಗಳಿಗೆ ನೇರವಾಗಿ ₹600 ಟಿಕೆಟ್ ನಿಗದಿ ಮಾಡಿದ್ದರೂ ಈಗ ಎಲ್ಲವೂ ಶೂನ್ಯವಾಗಿದೆ.
ಯಾಕೆಂದರೆ, ಕೊನೆಯ ಕ್ಷಣದಲ್ಲಿ ತೆಲಂಗಾಣ ಹೈಕೋರ್ಟ್ ಸರ್ಕಾರ ಹೊರಡಿಸಿದ ಆ ಜಿಓವನ್ನೇ ರದ್ದುಪಡಿಸಿದೆ! ವಕೀಲ ಶ್ರೀನಿವಾಸ್ ರೆಡ್ಡಿ ಹೂಡಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರೀಮಿಯರ್ ಶೋ ಟಿಕೆಟ್ ದರ ಹೆಚ್ಚಳಕ್ಕೆ ಸಂಪೂರ್ಣ ತಡೆ ನೀಡಿದೆ. ಈ ತೀರ್ಪಿನ ಪರಿಣಾಮ ‘ಅಖಂಡ 2’ ಮಾತ್ರವಲ್ಲ, ಬರುವ ಎಲ್ಲಾ ಚಿತ್ರಗಳಿಗೂ ಇದೇ ನಿಯಮ ಅನ್ವಯಿಸಲಿದೆ.
ಇದರಿಂದ ಡಿಸೆಂಬರ್ 11ರ ರಾತ್ರಿ ಆರಂಭವಾಗಬೇಕಿದ್ದ ‘ಅಖಂಡ 2’ ಪ್ರೀಮಿಯರ್‌ಗಳು ತೆಲಂಗಾಣದೆಲ್ಲೆಡೆ ರದ್ದಾಗಿದ್ದು ಇದು ಅಭಿಮಾನಿಗಳಿಗೆ ಭಾರಿ ನಿರಾಸೆಯುಂಟುಮಾಡಿದೆ. ಮೊದಲ ವಾರಾಂತ್ಯದ ಬೃಹತ್ ಕಲೆಕ್ಷನ್‌ಗೆ ಭಾರೀ ಬಾಧೆ ಉಂಟಾಗಬಹುದು. ಬೊಯಪಾಟಿ ಶ್ರೀನು ನಿರ್ದೇಶನದ, ಬಾಲಯ್ಯನ ನಾಗಸಾಧು ಪಾತ್ರವನ್ನೇ ಹೈಲೈಟ್ ಮಾಡಿರುವ ಈ ಮಸ್ಸಿವ್ ಆ್ಯಕ್ಷನ್ ಡ್ರಾಮಾ ಈಗ ನ್ಯಾಯಾಲಯದ ತೀರ್ಪಿನ ನೆರಳಿನಲ್ಲಿ ಬಿಡುಗಡೆಯಾಗಲು ಕಾಯುತ್ತಿದೆ.



