ಬೆಂಗಳೂರು: ರಾಜ್ಯದಲ್ಲಿ ನಿಯಮ ರಚನೆ ಇಲ್ಲದೆ ಬೈಕ್ ಟ್ಯಾಕ್ಸಿಗಳನ್ನು ಬಳಸಲು ಅನುಮತಿಸದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೀಗಾಗಿ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ (ಟ್ಯಾಕ್ಸಿ)ಗಳಾಗಿ ಬಳಸಲು ಅವಕಾಶ ನೀಡಲಾಗಿದೆ.
ಇದಕ್ಕಾಗಿ, ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಸಂಸ್ಥೆಗಳು ಈ ಸೇವೆ ಬಳಸಲು ಅನುಮತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸರ್ಕಾರಿ ನಿಯಮಾನುಸಾರ, ಕಾನೂನಿನ ಪ್ರಕಾರ ಸರ್ಕಾರ ಪರವಾನಿಗೆ ನೀಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರವು ರೈಡ್ ಶೇರಿಂಗ್ ಕಂಪನಿಗಳಾದ ಓಲಾ, ಉಬರ್ ಹಾಗೂ ಬೈಕ್ ಟ್ಯಾಕ್ಸಿ ಮಾಲೀಕರಿಗೆ ನಿಷೇಧ ಹೊರಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದು ಮಾಡಲು ಈ ಸಂಸ್ಥೆಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ಅರ್ಜಿಗಳನ್ನು ಮಾನ್ಯ ಮಾಡಿ, ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಮಾರ್ಗ ತೆರೆಯುವಂತೆ ಆದೇಶ ಹೊರಡಿಸಿದೆ.



