ಬೆಂಗಳೂರು:– ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ರಿಟ್ ಅರ್ಜಿ ವಿಚಾರಣೆ ಆ.29ಕ್ಕೆ ಹೈಕೋರ್ಟ್ ಮುಂದೂಡಿದೆ.
ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.29ರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಪಿಸಿ ಆಕ್ಟ್ 17ಎ ಅಡಿ ಅನುಮತಿ ಪ್ರಶ್ನಿಸಲಾಗಿದ್ದು, ರಿಟ್ ಅರ್ಜಿಯೊಂದಿಗೆ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ.
ರಾಜ್ಯಪಾಲರು ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ. ಇನ್ನು ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಪ್ರಭುಲಿಂಗ ನಾವದಗಿ ವಾದಿಸಿದ್ದಾರೆ.
ಎಲ್ಲಾ ವಾದವನ್ನು ಕೋರ್ಟ್ ಆಲಿಸಿದ್ದು, ಹೈಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಅಂದರೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಬೇಕು ಎಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಸೂಚನೆ ನೀಡಿದರು.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಾದ ಮಂಡಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಿಂಘ್ವಿ ವಾದ ಮಂಡಿಸಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬಾಕಿ ಇದೆ. ಗವರ್ನರ್ ಆದೇಶ ನೀಡುವ ಮುನ್ನ ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಆದರೆ, ಗವರ್ನರ್ ಯಾವ ಆಧಾರ ಇಲ್ಲದೆಯೂ ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಕೊಟ್ಟ ಉತ್ತರವನ್ನು ಅವರು ಹೇಳಿಲ್ಲ. ಇಲ್ಲಿ ರಾಜ್ಯಪಾಲರಿಗೆ ಸಿಎಂ ರಾಜೀನಾಮೆ ಕೊಡುವುದು ಮಾತ್ರ ಬೇಕಿದೆ. ಅದಕ್ಕೆ ಒಂದೇ ಒಂದು ಸರಿಯಾದ ಕಾರಣ ನೀಡದೇ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರಿ 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಇದಕ್ಕೆ ಕನಿಷ್ಠ ಎರಡು ನಿಯಮಗಳಿವೆ. ನೂರು ಪುಟಗಳ ಕ್ಯಾಬಿನೆಟ್ ನಿರ್ಧಾರಕ್ಕೆ ರಾಜ್ಯಪಾಲರು ಕೇವಲ ಎರಡು ಪುಟಗಳ ಉತ್ತರ ನೀಡಿದ್ದಾರೆ. ಸಂಪುಟದ ನಿರ್ಧಾರ ಪರಿಗಣಿಸಲ್ಲ ಎಂದಿದ್ದಾರೆ.
ವಾದ ಆಲಿಸಿದ ಪೀಠ ವಿಚಾರಣೆಯನ್ನು ಆ.29 ಕ್ಕೆ ಮುಂದೂಡಿಕೆ ಮಾಡಿದೆ.