ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಹೈಕೋರ್ಟ್, ಸರ್ಕಾರದ ವೈಫಲ್ಯ, KSCA ನಿರ್ಲ್ಯಕ್ಷದ ಬಗ್ಗೆ ತರಾಟೆಗೆ ತೆಗೆದುಕೊಂಡು ವಿಚಾರಣೆಯನ್ನ ಜೂನ್ಕ್ಕೆ 10ಕ್ಕೆ ಮುಂದೂಡಿತ್ತು.
ಅದರಂತೆ ಇಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಹೈಕೋರ್ಟ್ನತ್ತ ರಾಜ್ಯದ ಜನರ ಗಮನ ಶಿಫ್ಟ್ ಆಗಿದೆ. ಹೈಕೋರ್ಟ್ ವಿಚಾರಣೆಗೆ ಮೊದಲು ನಿನ್ನೆ ಸಂಜೆ, ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ರು. ಕಾನೂನು ಸಚಿವರು, ಗೃಹ ಸಚಿವರು, ಸಿಎಸ್, ಅಡ್ವೋಕೇಟ್ ಜನರಲ್ ಸೇರಿ ಹಲವರು ಭಾಗಿಯಾಗಿದ್ರು. ಈ ಸಭೆಯಲ್ಲಿ ಚರ್ಚಿಸಿ ಕೋರ್ಟ್ಗೆ ಏನ್ ಉತ್ತರಿಸಬೇಕೆಂದು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೈಕೋರ್ಟ್ ಇಂದು ನಡೆಸಲಿರೋ ವಿಚಾರಣೆ ಸರ್ಕಾರದ ದೃಷ್ಟಿಯಲ್ಲೂ ಮಹತ್ವದ್ದಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ಆಯಾಮ ತಂದುಕೊಡೋ ಸಾಧ್ಯತೆ ಇದೆ. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ನ ಏಕಸದಸ್ಯ ಪೀಠ ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಹೀಗಾಗಿ ನಿಖಿಲ್ ಸೋಸಲೆಗೂ ಇವತ್ತು ಬಿಗ್ ಡೇ ಆಗಿದೆ.