ಬೆಂಗಳೂರು: ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಅಂತಿಮವಾಗಿ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ, ಆದರೆ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ಈ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದೆ.
ದೀರ್ಘಕಾಲ ವಾದ, ಪ್ರತಿವಾದ ಆಲಿಸಿದ ಕೋರ್ಟ್, ಪೀಠ – ಮೇಲಿನದನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಸಮೀಕ್ಷೆಯನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ. ಸಂಗ್ರಹಿಸಿದ ದತ್ತಾಂಶವನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ. ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ಗೌಪ್ಯವಾಗಿಡಲಾಗಿದೆ ಎಂದು ಆಯೋಗವು ಖಚಿತಪಡಿಸಿಕೊಳ್ಳಬೇಕು.
ಈ ಪ್ರಕರಣ ಇತ್ಯರ್ಥವಾಗುವರೆಗೆ ಯಾವುದೇ ಕಾರಣಕ್ಕೂ ಸಂಗ್ರಹಿಸಿದ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಅಫಿಡವಿಟ್ ಸಲ್ಲಿಸಬೇಕು. ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಷರತ್ತು ವಿಧಿಸಿ ಡಿಸೆಂಬರ್ ಎರಡನೇ ವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.